ನ್ಯೂಸ್

ವಾಲ್ಮೀಕಿ ಅಭಿವೃದ್ಧಿ ನಿಗಮ; ಅಕ್ರಮ ಹಣದ ವರ್ಗಾವಣೆಗೆ ಸಿಎಂ ನೇರ ಹೊಣೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಹೊರಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಅಕ್ರಮದಲ್ಲಿ ಸರ್ಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲ ನಿಗಮ-ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಒತ್ತಾಯ ಮಾಡಿದರು.

ನಿಗಮದ ಹಣ ಹಲವಾರು ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಬಗ್ಗೆ ದಾಖಲೆಗಳೇ ಬಹಿರಂಗ ಆಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಯಾಕೆ ಹೋಯಿತು? ಯಾರು ವರ್ಗಾವಣೆ ಮಾಡಿಸಿದರು? ಇಲ್ಲಿ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅದ ಕೆಲ ಹೊತ್ತಿನಲ್ಲಿ ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ಅಷ್ಟೂ ದೊಡ್ಡ ಮೊತ್ತ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ. ಸಿಎಂ ಸೇರಿದಂತೆ ಇಡೀ ಸಂಪುಟವೇ ಶಾಮೀಲಾಗಿದೆ ಎಂದು ಆರೋಪ ಮಾಡಿದರು.

ಕೇವಲ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಾತ್ರ ಹಣ ವರ್ಗಾವಣೆ ಆಗಿರಲು ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ನಿಗಮ ಮಂಡಳಿಗಳ ಖಾತೆಗಳಿಂದ ಹಣ ವರ್ಗ ಆಗಿರುವ ಸಾಧ್ಯತೆ ಇದೆ. ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಯಾರೆಲ್ಲ ಉಸ್ತುವಾರಿಗಳು ಇದ್ದರು? ಅದನ್ನೆಲ್ಲ ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಿಗಮ ಮಂಡಳಿ ಬಗ್ಗೆ ತನಿಖೆ ಆಗಲಿ

ಈ ಹಗರಣಕ್ಕೆ ಸಂಬಂಧಿಸಿ 14 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಖಾತೆಗಳನ್ನು ತೆರೆದವರು ಯಾರು? ಯಾವೆಲ್ಲ ಕಾಣದ ಕೈಗಳು ಇವುಗಳ ಹಿಂದೆ ಇವೆ? ಎಲ್ಲ ಹೊರಗೆ ಬರಬೇಕು. ಜತೆಗೆ ಎಲ್ಲ ನಿಗಮ-ಮಂಡಳಿಗಳ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆದರೆ ಇನ್ನೆಷ್ಟು ಅಕ್ರಮಗಳು ಹೊರಗೆ ಬರುತ್ತವೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಏನು ಹೇಳುತ್ತಾರೆ?

ಕೆಆರ್‌ಡಿಎಲ್ ಖರ್ಗೆ ಅವರ ಇಲಾಖೆಗೆ ಸೇರಿದ್ದು. ಅಲ್ಲಿಯೂ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಪ್ರಿಯಾಂಕ್ ಮಾತಾಡ್ತಾರಾ? ಎಂದು ಕೇಳಿದರು.

ಕಾಂಗ್ರೆಸ್ ಹೈ ಕಮಾಂಡ್ ಮಾಡಿಸಿದೆ

ದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೂಗಿನ ನೇರದಲ್ಲೇ ಈ ಅಕ್ರಮ ಹಣದ ವರ್ಗಾವಣೆ ನಡೆದಿದೆ. 200 ಪರ್ಸೆಂಟ್ ಕಾಂಗ್ರೆಸ್‌ನ ಹೈಕಮಾಂಡ್ ಗಮನಕ್ಕೆ ಬಂದೇ ಇದೆಲ್ಲ ನಡೆದಿದೆ. ವಿವಿಧ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ರಾಜ್ಯದಿಂದಲೇ ಹಣ ಪೂರೈಕೆ ಮಾಡಿದೆ ಎನ್ನುವುದಕ್ಕೆ ಇದೇ ಸಾಕ್ಷ್ಯ ಎಂದು ಅವರು ಕಾಂಗ್ರೆಸ್ ಹೈ ಕಮಾಂಡ್ ಮೇಲೆಯೇ ನೇರ ಆರೋಪ ಮಾಡಿದರು.

ಎಸ್‌ಐಟಿಯಿಂದ ಸಾಕ್ಷ್ಯ ನಾಶ

ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಇರುವುದರಿಂದ ಸಿಬಿಐ ತನಿಖೆ ಆಗಿಯೇ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಆದರೆ ದಾಖಲೆ ನಾಶ ಮಾಡಬಹುದು, ಕಡತಗಳನ್ನು ಸುಟ್ಟು ಹಾಕಬಹುದು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಅವರ ಮನೆಯಿಂದ ಪೆನೆ ಡ್ರೈವ್ ತೆಗೆದುಕೊಂಡು ತೆಗೆದುಕೊಂಡು ಬಂದರಲ್ಲ, ಆ ಪೆನ್ ಡ್ರೈವ್ ಎಲ್ಲಿದೆ ಈಗ? ಯಾಕೋ.. ಈ ಬಾರಿ ಪೆನ್ ಡ್ರೈವ್ ಹೆಚ್ಚು ಸದ್ದು ಮಾಡುತ್ತಿದೆ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಟಾಂಗ್ ಕೊಟ್ಟರು.