ನ್ಯೂಸ್

ವಾಲ್ಮೀಕಿ ನಿಗಮ ಹಗರಣ: ಸರ್ಕಾರದಿಂದಲೇ ಚಂದ್ರಶೇಖರ್ ಜೀವ ಹರಣ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರವೇ ಮಾಡಿದ ಕೊಲೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಆಡಳಿತದಲ್ಲಿ ಬಿಗಿ ಇದ್ದಿದ್ದರೆ ಈ ಹಗರಣ ಆಗುತ್ತಿರಲಿಲ್ಲ. ಚುನಾವಣಾ ನೀತಿ ಸಂಹಿತೆ ಇರುವ ಸಂದರ್ಭದಲ್ಲೇ 94 ಕೋಟಿ ರೂ. ವರ್ಗಾವಣೆಯಾಗಿದೆ. ಚಂದ್ರಶೇಖರ್ ಅವರ ಡೆತ್ ನೋಟ್ ಇಲ್ಲದಿದ್ದರೆ ಸಿದ್ದರಾಮಯ್ಯ ಅವರೇ ಈ ಪ್ರಕರಣ ಏನು ಮಾಡುತ್ತಿದ್ದಿರಿ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರ್ಕಾರವೇ ಮಾಡಿದ ಕೊಲೆ. ಯಾವ ರೀತಿ ವರ್ಗಾವಣೆ ದಂಧೆಯ ವ್ಯವಸ್ಥೆ ತಂದಿದ್ದೀರಾ? ನನಗೆ ಅನುಭವ ಆಗಿದೆ. ನಾನು ಇದ್ದ 14 ತಿಂಗಳು ನಾನು ಕೆಲಸ ಮಾಡಲು ಬಳಸಿಕೊಂಡಿಲ್ಲ. ಇಲಾಖೆಗೆ ಸಚಿವರು ಹೇಳಿದ್ದವರನ್ನು ಹಾಕಬೇಕು. ವರ್ಗಾವಣೆ ದಂಧೆ ಬೀದಿಯಲ್ಲಿ ಇಟ್ಟಿದ್ದೀರಾ? ಎಂದು ಅವರು ಪ್ರಶ್ನಿಸಿದರು.

ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ: ನ್ಯಾ.ನಾಗಮೋಹನ್ ದಾಸ್ ಅವರಿಂದ 40% ತನಿಖೆ ಮಾಡಿಸುತ್ತಿದ್ದೀರಿ. ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ ಅಲ್ಲವೇ? ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ? ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದೀರಿ? ನಿಮಗೆ ನನ್ನನ್ನು ಪ್ರಶ್ನೆ ಮಾಡಲು ಆಗಲ್ಲ. ನನ್ನನ್ನು ಕ್ಲರ್ಕ್ ಆಗಿ ಇಟ್ಟುಕೊಂಡಿದ್ದಿರಿ. ಅದಕ್ಕೆ ಕೇಳೋಕೆ ಆಗಲ್ಲ ಎಂದರು ಅವರು ಎಂದು ಎಚ್​ಡಿಕೆ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಟಿ.ಬಿ. ಜಯಚಂದ್ರರಿಗೆ ಕೊಲೆ ಬೆದರಿಕೆ! : ಹಾಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ನೈಸ್ ಹಗರಣ ವರದಿ ಕೊಟ್ಟರು. ಅದನ್ನು ಏನು ಮಾಡಿದೀರಿ? ವರದಿ ಕೊಟ್ಟ ಜಯಚಂದ್ರ ಅವರಿಗೆ ಕೊಲೆ ಬೆದರಿಕೆ ಹಾಕಿದರು ನಿಮ್ಮ ಪಕ್ಷದವರು. ರಾಜ್ಯ ಸರ್ಕಾರದ ಹಗರಣಗಳು ದೇಶಾದ್ಯಂತ ಚರ್ಚೆ ಆಗುತ್ತಿವೆ. ನಾನು ಆಂಧ್ರ ಪ್ರದೇಶಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ, ಅಲ್ಲೂ ಕೂಡ ಇವರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಕ್ಕೆ ಸಹಿಸಿಕೊಳ್ತಿಲ್ಲವೆಂದು ಸಿಎಂ ಹೇಳುತ್ತಿದ್ದಾರೆ. ಅದಕ್ಕೆ ಅವರ ಪುತ್ರ ತಾಳ ಹಾಕುತ್ತಿದ್ದಾರೆ ಎಂದು ಸಚಿವರು ಟೀಕಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಸ್ತಾಪಿಸಿದ ಕುಮಾರಸ್ವಾಮಿ: ವಾಲ್ಮೀಕಿ ನಿಗಮದ ಹಣ 10 -20 ಬ್ಯಾಂಕ್ ಖಾತೆಗಳಿಗೆ ಐದು, ಮೂರು ಕೋಟಿ ಹಣ ಹೋಗಿದೆ. ಅವೆಲ್ಲಾ ಬೇನಾಮಿ ಅಕೌಂಟ್​ಗಳು. ಲೋಕಸಭಾ ಚುನಾವಣೆ ನೀತಿ ಜಾರಿಯಾದ ಸಂದರ್ಭದಲ್ಲಿ ಹೋಗಿದೆ. ಯಾವ ಯಾವ ಅಕೌಂಟ್ ಗೆ ಹಾಕಿಕೊಂಡಿದ್ದಾರೆ. ನಿಗಮದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು ಡೆತ್ ನೋಟ್ ಬರೆದು ಹೋದರು.‌ ಡೆತ್ ನೋಟ್ ಇಲ್ಲದಿದ್ದರೆ ಏನು ಮಾಡುತಿದ್ದಿರಿ ಸಿದ್ದರಾಮಯ್ಯನವರೇ? ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆಯೋಕೆ ಹೋಗಿದ್ದೀರಾ ನೀವು? ಆ ಸಮಾಜದ ಅಭಿವೃದ್ಧಿಗೆ ಇಟ್ಟ ಹಣವನ್ನು ದರೋಡೆ ಮಾಡಿದ್ದೀರಾ? ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಲ್ಲವೇ? ನಾನು ಒಂದು ಪ್ರಕರಣ ಬಗ್ಗೆ ಲಿಂಕ್ ಮಾಡ್ತೀನಿ. ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಒಂದು ತಿಂಗಳಿಂದ ತೋರಿಸ್ತಾ ಇದ್ದೀರಾ? ಆದರೆ ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳ್ತೀರಾ. ಈ ಪ್ರಕರಣವನ್ನು ಆತ್ಮಹತ್ಯೆ ಅಂತ ಹೇಳ್ತೀರಾ? ಅಥವಾ ಸರ್ಕಾರದಿಂದ ಕೊಲೆ ಅಂತ ಹೇಳ್ತೀರಾ? ಎಂದು ಪ್ರಶ್ನಿಸಿದರು.

ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣ ಏನಾಯಿತು?: ನೀವೆ ಹಿಂದಿನ ಸರ್ಕಾರದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ರಕ್ಷಣೆ ಕೊಟ್ಟಿದ್ದೀರಾ ಮುಖ್ಯಮಂತ್ರಿಗಳೇ? ಇವತ್ತು ಹಿಂದುಳಿದ ವರ್ಗಗಳ ರಕ್ಷಣೆ ಪಡೆದುಕೊಂಡಿದ್ದೀರಾ? ನಾನು ಆ ಕುರುಬ ಸಮುದಾಯ ಯುವಕನ ಪರ ಧ್ವನಿ ಎತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಅಂತ ಹೇಳಲ್ಲ. ಸರ್ಕಾರದ ನಡೆದ ಹಗರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಇಲ್ಲಿ ನಿಮ್ಮ ಎಸ್ಐಟಿ ಯಾವ ರೀತಿ ನಡೆದುಕೊಂಡಿದೆ. ಡೆತ್ ನೋಟ್ ನಲ್ಲಿ ಮಂತ್ರಿ ಸೂಚನೆ ಮೇರೆಗೆ ಅಂತ ಬರೆದಿದ್ದಾರೆ. ಯಾರಪ್ಪ ಇಲ್ಲಿ ಡಿಜಿಪಿಗೆ ನೇರವಾಗಿ ದೂರು ನೀಡಬಹುದು. ನೇರವಾಗಿ ದೂರು ಪಡೆದು ನೇರವಾಗಿ ಪೊಲೀಸ್ ಠಾಣೆಗೆ ಡಿಜಿಪಿ ಕಳಿಸ್ತಾರೆ. ಯಾರನ್ನು ಬಂಧಿಸಿಸಿರಿ ಎಂದು ಡಿಜಿಪಿ ವಿರುದ್ಧ ಕಿಡಿಕಾರಿದ0ರು.