ವಿಧಾನಪರಿಷತ್ ಸದಸ್ಯ ಸಿಟಿ ರವಿ 
ನ್ಯೂಸ್

ವಾಲ್ಮೀಕಿ ನಿಗಮದ ಹಗರಣದ ತನಿಖೆ ಅಸಮರ್ಪಕ: ಸಿ.ಟಿ.ರವಿ ಆಕ್ಷೇಪ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ತನಿಖೆ ಅಸಮರ್ಪಕವಾಗಿದೆ. ಒತ್ತಡಕ್ಕೆ ಕಟ್ಟುಬಿದ್ದಂತೆ ಎಸ್ ಐಟಿ ತನಿಖೆ ನಡೆಸುತ್ತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಖಾಸಗಿ ಹೋಟೆಲ್ ನೆಕ್ಕುಂಟಿ ನಾಗರಾಜ್ ಗೆ ಮಾಜಿ ಸಚಿವ ಬಿ.ನಾಗೇಂದ್ರ ಸಂಪರ್ಕ ಒದಗಿಸಿಕೊಟ್ಟಿದ್ದರು. ನಿಗಮದ ಹಣ ಲೂಟಿ ಮಾಡಲೆಂದೇ ಈ ಅಕ್ರಮ ನಡೆದಿದೆ. ಕಾಂಗ್ರೆಸ್ ಪಕ್ಷದವರಿಗೂ ಸಂದಾಯವಾಗಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ದೊಡ್ಡವರ ಕೈವಾಡವಿದ್ದಂತಿದೆ. ಹೀಗಾಗಿ ಸಮಗ್ರ ತನಿಖೆ ನಡೆಸುವ ಇಚ್ಛೆ ಎಸ್ ಐಟಿಗೆ ಇದ್ದಂತಿಲ್ಲ. ಈಗ ಹೊರ ಬಂದಿರುವ ಆಡಿಯೋ, ವಿಡಿಯೋ ಪೂರ್ವಾಪರ ತಿಳಿದುಕೊಳ್ಳದೆ ಏನನ್ನೂ ಹೇಳಲಾಗದು. ದೊಡ್ಡವರ ರಕ್ಷಣೆಗಾಗಿ ಈ ಆಡಿಯೋ ಬಿಟ್ಟಿದ್ದಾರೆಯೆ ? ತಿಳಿಯದು ಎಂದು ಸಿ.ಟಿ.ರವಿ ಶಂಕೆ ವ್ಯಕ್ತಪಡಿಸಿದರು.

ನ್ಯಾಯಾಂಗ ತನಿಖೆಗೆ ಆಗ್ರಹ

ಮೈಸೂರು ನಗರಾಭಿವೃದ್ಧಿ ನಿವೇಶನ ಹಂಚಿಕೆ ಅವ್ಯವಹಾರ ಮತ್ತೊಂದು ಅರ್ಕಾವತಿ ರೀಡೂ ಆಗಬಾರದು. ಸಿಎಂ ಸಿದ್ದರಾಮಯ್ಯ ನಿಲುವಿನಲ್ಲಿ ಪ್ರಾಮಾಣಿಕತೆಯಿಲ್ಲ. ಜತೆಗೆ ಸಮರ್ಥನೆಗೆ ಇಳಿದಿರುವ ಕಾರಣ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರು 2013ರ ಚುನಾವಣೆಯಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ 3.16 ಎಕರೆ ಜಮೀನಿನ ಉಲ್ಲೇಖವಿಲ್ಲ. 2010 ರಲ್ಲಿ ಅವರ ಬಾಮೈದ ಸಿದ್ದರಾಮಯ್ಯ ಪತ್ನಿಗೆ ದಾನ ರೂಪದಲ್ಲಿ ಜಮೀನು ಕೊಟ್ಟಿರುತ್ತಾರೆ. ಆದರೂ  2013 ರ ಅಫಿಡವಿಟ್ ನಲ್ಲಿ ನಮೂದಿಸಿಲ್ಲ.

ಅಂದರೆ ಸಿದ್ದರಾಮಯ್ಯ ನವರಿಗೆ ಕಾಣದಂತೆ ಅವರ ಪತ್ನಿಗೆ ಬಾಮೈದ ಜಮೀನು ದಾನ‌ ಮಾಡಿದರೆ ?. 2023ರ‌ ಚುನಾವಣಾ ಅಫಿಡವಿಟ್ ನಲ್ಲಿ ಈ ಜಮೀನಿನ ಉಲ್ಲೇಖ ಇದೆ‌. ಮಾರುಕಟ್ಟೆ ಮೌಲ್ಯ 8.62 ಕೋಟಿ ರೂ.ಗಳೆಂದು ತೋರಿಸಿದ್ದಾರೆ. ಈಗ ಸಿದ್ದರಾಮಯ್ಯ ಆ ಜಮೀನಿನ ಬೆಲೆ 62 ಕೋಟಿ ರೂ.ಗಳೆಂದು ಹೇಳುತ್ತಿದ್ದಾರೆ. ಒಂದೇ ವರ್ಷಕ್ಕೆ ಆ ಜಮೀನಿನ ಬೆಲೆ ಇಷ್ಟೊಂದು ಏರಿಕೆಯಾಯಿತೆ ?. ಜಮೀನು ಕಳೆದುಕೊಂಡ ರೈತರಿಗೂ ಇದೇ ಬೆಲೆ ಕೊಡುತ್ತಾರೆಯೆ ? ಎಂದು ಕೇಳಿದರು.

ಮೊದಲಿಗೆ  ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ನಂತರ ನ್ಯಾಯಾಂಗ ತನಿಖೆಯಾಗಬೇಕು ಎಂದು ಸಿ.ಟಿ.ರವಿ ತಮ್ಮ ಒತ್ತಾಯವನ್ನು ಪುನರುಚ್ಚರಿಸಿದರು.