ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಾಜಿ ಸಚಿವ ಬಿ.ನಾಗೇಂದ್ರಗೆ ನೋಟಿಸ್ ಜಾರಿ ಮಾಡಿದೆ.
ನಿಗಮದಲ್ಲಿ ಅಕ್ರಮ ವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲಾಣ್ಯ ಇಲಾಖೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ಜುಲೈ 9ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಜೊತೆಗೆ ನಿಗಮದ ಅಧ್ಯಕ್ಷ ಮತ್ತು ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಮತ್ತು ಈ ಇಬ್ಬರ ಆಪ್ತ ಸಹಾಯಕರಿಗೂ ನೋಟಿಸ್ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಗರಣದಲ್ಲಿ ಇಬ್ಬರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿಗಮದ 94.73 ಕೋಟಿ ರೂ. ಅವ್ಯವಹಾರ ಆರೋಪ ಸಂಬಂಧ ಇದುವರೆಗೂ 11 ಮಂದಿಯನ್ನು ಬಂಧಿಸಿ 30 ಕೋಟಿ ರೂ.ಗೂ ಅಧಿಕ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿತರ ಕಂಪನಿಗಳ ಮೂಲಕ 196 ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ದೊಡ್ಡಮಟ್ಟದಲ್ಲಿ ಅವ್ಯವಹಾರಗಳು ನಡೆದಿರುವಾಗ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಗಮನಕ್ಕೆ ಬಂದಿಲ್ಲವೇ? ಅವ್ಯವಹಾರ ಬೆಳಕಿಗೆ ಬಂದ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಎಸ್‌ಐಟಿ ಪ್ರಶ್ನಿಸಲಿದೆ ಎಂದು ತಿಳಿದುಬಂದಿದೆ.