ಪವಿತ್ರಾ ಕುಂದಾಪುರ ಬೆಂಗಳೂರು
ಮಾನವ ಹಕ್ಕುಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಒಂದು ವರ್ಷದೊಳಗೆ ದೂರು ದಾಖಲಾದರಷ್ಟೇ ಆರೋಪಕ್ಕೆ ಮಾನ್ಯತೆ ಇರುತ್ತದೆ. ನಿಗದಿತ ಅವಧಿಯಲ್ಲಿ ದೂರು ವರದಿಯಾದಾಗ ಮಾತ್ರ ಮಾನವ ಹಕ್ಕುಗಳ ಆಯೋಗ (ಎಸ್ಸೆಚ್ಚಾರ್ಸಿ) ಮಧ್ಯಪ್ರವೇಶಿಸಲು ಅವಕಾಶವಿರುತ್ತದೆ ಎಂದು ಹೈಕೋರ್ಟ್ ಮೌಖಿಕ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಇದರೊಂದಿಗೆ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಎದುರಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ದೊಡ್ಡಮಟ್ಟದಲ್ಲಿ ನಿರಾಳತೆ ಸಿಕ್ಕಿದೆ.
ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣದಲ್ಲಿ ಬೆಂಗಳೂರಿನ ಆರೋಪಿ ನೀರಜ್ ಶಾಂತಕುಮಾರ್ ಎಂಬಾತನ ಬ್ಯಾಂಕ್ ಖಾತೆ ಫ್ರೀಜ್ ಮಾಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆಂದು ಡಿವೈಎಸ್ಪಿ ಡಿ.ಎಸ್. ಅಶೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಾರಸ್ಸು ಮಾಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮಾನವ ಹಕ್ಕುಗಳ ಕಾಯ್ದೆಯ ಸೆಕ್ಷನ್ 36ರ ಅನ್ವಯ 1 ವರ್ಷದೊಳಗೆ ಪ್ರಕರಣ ದಾಖಲಾಗಿ ವಿಚಾರಣಾ ಪ್ರಕ್ರಿಯೆ ಆರಂಭಿಸಬೇಕು. ನಂತರ ಪ್ರಕರಣ ದಾಖಲಾದರೆ ಆರೋಪಕ್ಕೆ ಮಾನ್ಯತೆ ಇರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸಿ, ಡಿವೈಎಸ್ಪಿ ಡಿ.ಎಸ್.ಅಶೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಡಿವೈಎಸ್ಪಿ ವಾದವೇನು?
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ. ಸಿದ್ದಾರ್ಥ್ ಮುಚ್ಚಂಡಿ ವಾದ ಮಂಡಿಸಿ, ಪ್ರಕರಣ ಸಂಬಂಧ ಮಾನವ ಹಕ್ಕುಗಳ ಆಯೋಗ ಆದೇಶ ಹೊರಡಿಸುವ ಮುನ್ನ ಮಾನವ ಹಕ್ಕುಗಳ ಕಾಯ್ದೆ ಸೆಕ್ಷನ್ 16ರ ಅನ್ವಯ ಕಕ್ಷಿದಾರರ ವಿಚಾರಣೆಗೆ ಅವಕಾಶವನ್ನೇ ಕೊಟ್ಟಿಲ್ಲ. ಅವರ ವಾದ ಆಲಿಸದೆ ಇಲಾಖಾ ವಿಚಾರಣೆಗೆ ಶಿಾರಸ್ಸು ಆದೇಶ ಹೊರಡಿಸಿದೆ. ಇದು ಸಹಜ ನ್ಯಾಯದ ಉಲ್ಲಂಘನೆ. 2011ರಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ, 2014ರಲ್ಲಿ ದೂರು ದಾಖಲಿಸಲಾಗಿದೆ. ಮಾನವ ಹಕ್ಕುಗಳ ಕಾಯ್ದೆಯ ಸೆಕ್ಷನ್ 36 (2) ಅನ್ವಯ ಒಂದು ವರ್ಷದ ನಂತರ ನೀಡಿರುವ ದೂರು ಮಾನ್ಯತೆ ಪಡೆದುಕೊಳ್ಳುವುದಿಲ್ಲ. ಹಾಗಾಗಿ ಆದೇಶವನ್ನು ರದ್ದುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಎಸ್ಸೆಚ್ಚಾರ್ಸಿ ಹೇಳಿದ್ದೇನು?
ಮಾನವ ಹಕ್ಕುಗಳ ಆಯೋಗದ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರನ್ನು ವಿಚಾರಣೆಗೊಳಪಡಿಸಿದ ನಂತರವೇ ಆದೇಶ ಹೊರಡಿಸಿದೆ. ಅಲ್ಲದೆ ದಾಖಲೆಗಳ ಅನುಸಾರ ಅರ್ಜಿದಾರರು ಆರೋಪ ಎಸಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಜತೆಗೆ ಕಾಯ್ದೆಯ ಸೆಕ್ಷನ್ 36 ( 2) ಅನ್ವಯ ನಿಗದಿತ ಸಮಯದಲ್ಲಿ ದೂರು ನೀಡಲಾಗಿದ್ದು, ಯಾವುದೇ ರೀತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಹೈಕೋರ್ಟ್ ಆದೇಶವೇನು?
ವರದಕ್ಷಿಣ ಕಿರುಕುಳ ಪ್ರಕರಣದ ತನಿಖಾಧಿಕಾರಿಯಾಗಿದ್ದ ಅರ್ಜಿದಾರರು ಬ್ಯಾಂಕ್‌ಗೆ ಸೂಚಿಸಿ ಆರೋಪಿ ನೀರಜ್ ಶಾಂತಕುಮಾರ್ ಅವರ ವೇತನ ಖಾತೆಯನ್ನು 40 ತಿಂಗಳು ಫ್ರೀಜ್ ಮಾಡಿಸಿದ್ದಾರೆ. ಈ ಪ್ರಕರಣದಲ್ಲಿ 2012ರಲ್ಲಿ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆದರೆ, ಅವರ ವಿರುದ್ಧ 2014ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಮಾಡಲಾಗಿದೆ.
ಮಾನವ ಹಕ್ಕುಗಳ ಕಾಯ್ದೆಯ ಸೆಕ್ಷನ್ 36 ಆಯೋಗದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದೆ. ಉಪ ಸೆಕ್ಷನ್ 2ರ ಪ್ರಕಾರ ಘಟನೆ ನಡೆದ ಒಂದು ವರ್ಷದ ನಂತರ ದಾಖಲಾದ ಪ್ರಕರಣವನ್ನು ವಿಚಾರಣೆ ನಡೆಸುವ ಅಧಿಕಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಇರುವುದಿಲ್ಲ. ಸದರಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಸಿರುವ ಆರೋಪ 2011ರಲ್ಲಿ ನಡೆದಿದೆ. 2014ರಲ್ಲಿ ದೂರು ದಾಖಲಿಸಲಾಗಿದೆ. ಅವಧಿ ಮುಗಿದಿರುವುದರಿಂದ ಆಯೋಗ ಮಧ್ಯಪ್ರವೇಶಿಸಲು ಅಧಿಕಾರವಿಲ್ಲ. ಅಲ್ಲದೆ, ಆದೇಶ ಹೊರಡಿಸುವ ಮುನ್ನ ಡಿವೈಎಸ್ಪಿ ಅವರ ಹೇಳಿಕೆಗೂ ಅವಕಾಶ ಕೊಟ್ಟಿಲ್ಲ ಎಂದು ತೀರ್ಪಿನಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.
ಪ್ರಕರಣವೇನು?
ವರದಕ್ಷಿಣ ಕಿರುಕುಳ ನೀಡುತ್ತಿರುವುದಾಗಿ ಗಂಡ ನೀರಜ್ ಶಾಂತಕುಮಾರ್ ವಿರುದ್ಧ 2011 ಜು.12ರಂದು ಬಳ್ಳಾರಿ ಸಂಡೂರು ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದರು. ಪತಿಯೂ ತನ್ನ ತಂದೆಯಿಂದ ವರದಕ್ಷಿಣೆಯಾಗಿ 4 ಲಕ್ಷ ನಗದು, 480 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಪಡೆದುಕೊಂಡು ಬ್ಯಾಂಕ್ ಲಾಕರ್‌ನಲ್ಲಿ ಇರಿಸಿರುವುದಾಗಿ ತಿಳಿಸಿದ್ದಳು. ಆಗ ಇನ್‌ಸ್ಪೆಕ್ಟರ್ ಆಗಿದ್ದ ಅಶೋಕ್ ಕುಮಾರ್ (ಈಗ ಬೀದರ್‌ನಲ್ಲಿ ಡಿವೈಎಸ್ಪಿ) ಬ್ಯಾಂಕ್‌ಗಳಿಗೆ ಪತ್ರ ಬರೆದು ಆರೋಪಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿದ್ದರು. ಅಶೋಕ್ ಕುಮಾರ್ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು, ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.