ನ್ಯೂಸ್

ರಾಷ್ಟ್ರೀಯ ಆಯೋಗ ಕಾಯ್ದೆ ಸಿಂಧುತ್ವ ವಿಚಾರ : ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಕೇಂದ್ರ

 ಬೆಂಗಳೂರು:  ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕಾಯ್ದೆಯ-2020 ಇದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಜ್ಯ ಖಾಸಗಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸಂಸ್ಥೆಯ ಒಕ್ಕೂಟ 2022ರಲ್ಲಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರ ಮತ್ತೆ ಕಾಲಾವಕಾಶ ಕೇಳಿದೆ.

ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ನೀವು ಆಕ್ಷೇಪಣೆ ಸಲ್ಲಿಸುವತನಕ ಹಿಂದಿನ ಆದೇಶ ಮುಂದುವರಿಯಲಿದೆ. ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಕ್ಕೆ ಆಯೋಗದ ಆಕ್ಷೇಪಣೆ ಬಂದಿದೆ. ಇಲ್ಲದಿದ್ದರೆ ಅದೂ ಆಗುತ್ತಿರಲಿಲ್ಲ.

ಮೊದಲು ಆಕ್ಷೇಪಣೆ ಸಲ್ಲಿಸಿ ಆಮೇಲೆ ನೋಡೋಣ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಜ.3ಕ್ಕೆ ಮುಂದೂಡಿತು.

ಅಲ್ಲದೆ, ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಹಿನ್ನಲೆಯಲ್ಲಿ ಅಟಾರ್ನಿ ಜನರಲ್ ಪರವಾಗಿ ನೋಟಿಸ್ ಸ್ವೀಕರಿಸುವಂತೆ ಕೇಂದ್ರ ಸರ್ಕಾರದ ಪರ ವಕೀಲರಿಗೆ ಹಾಗೂ ರಾಜ್ಯ ಸರ್ಕಾರದ ಪರ ನೋಟಿಸ್ ಸ್ವೀಕರಿಸುವಂತೆ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಇದೇ ವೇಳೆ ಸೂಚಿಸಿತು