ನ್ಯೂಸ್

ಬೆನ್ನು, ಸೊಂಟ ನೋವಿನ ನಿಯಂತ್ರಣಕ್ಕೆ ತಿರುಚಿ ಅಭ್ಯಾಸ ಮಾಡುವ ವಕ್ರಾಸನ

ವಕ್ರ ಎಂದರೆ ತಿರುವು ಮತ್ತು ಯೋಗ ಭಾಷೆಯಲ್ಲಿ ಬೆನ್ನು ಮೂಳೆಯ ತಿರುವು ಎಂದರ್ಥ. ಇದಕ್ಕೆ ಆಂಗ್ಲ ಭಾಷೆಯಲ್ಲಿ ಹಾಪ್ ಸ್ನೈನಲ್ ಟ್ವಿಸ್ಟ್ ಪೊಸ್ ಎನ್ನುತ್ತಾರೆ. ಅಂದರೆ ಬೆನ್ನು ಮೂಳೆಯನ್ನು ಅರ್ಧ ಭಾಗಕ್ಕೆ ತಿರುಗಿಸುವುದು. ತಿರುಚಿ ಅಭ್ಯಾಸ ಮಾಡುವ ಅರ್ಧಮತ್ಸೆ್ಯೕಂದ್ರಾಸನದ ಸರಳ ರೂಪ ಈ ಆಸನವಾಗಿದೆ (ವಕ್ರಾಸನ). ಇದು ಬೆನ್ನು ಮೂಳೆಯನ್ನು ನಿಧಾನವಾಗಿ ತಿರುಗಿಸುವ, ನಮ್ಯತೆಯನ್ನು ಉತ್ತೇಜಿಸುವ, ಜೀರ್ಣಕ್ರಿಯೆಯನ್ನು ಸುಧಾರಿಸುವ ಮತ್ತು ಬೆನ್ನು ನೋವನ್ನು ನಿವಾರಿಸುವ ಯೋಗ ಭಂಗಿಯಾಗಿದೆ. ವಕ್ರಾಸನ, ಆರಂಭಿಕ ಹಂತದ ಭಂಗಿಯಾಗಿದೆ. ಆದ್ದರಿಂದ ಇದನ್ನು ಬಹುತೇಕ ಯಾರಾದರೂ ಅಭ್ಯಾಸ ಮಾಡಬಹುದು. ಈ ಭಂಗಿಯನ್ನು ಎಲ್ಲಾ ತಿರುಚುವ ಭಂಗಿ ವ್ಯತ್ಯಾಸಗಳಿಗೆ ಮೂಲ ಭಂಗಿ ಎಂದು ಪರಿಗಣಿಸಬಹುದು.

ವಿಧಾನ: ಎರಡು ಕಾಲುಗಳನ್ನು ನೇರವಾಗಿ ಚಾಚಿ ಕುಳಿತುಕೊಳ್ಳಿ. ಉಸಿರನ್ನು ಬಿಡುತ್ತಾ ಎರಡು ಕೈಗಳ ಸಹಾಯದಿಂದ ಬಲಗಾಲನ್ನು ಮಡಿಸಿ ಎಡ ಮಂಡಿಯ ಬಲ ಪಕ್ಕದಲ್ಲಿರಿಸಿ. ಆಮೇಲೆ ಉಸಿರನ್ನು ತೆಗೆದುಕೊಂಡು ಬಲ ಕೈ ನೇರವಾಗಿಸಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಕಣ್ಣುಗಳಿಂದ ಬಲ ಕೈಯ ಮಧ್ಯದ ಬೆರಳುಗಳನ್ನು ನೋಡುತ್ತಾ ದೇಹವನ್ನು ಬಲ ಬದಿಗೆ ತಿರುಗಿಸಿ. ಬಲ ಕೈಯನ್ನು ನೆಲಕ್ಕೆ ಊರಿ ಮತ್ತು ಬೆನ್ನು, ಕುತ್ತಿಗೆ ನೇರವಾಗಿಸಿ. ಆಮೇಲೆ ಎಡಕೈಯಿಂದ ಬಲಗಾಲಿನ ಪಾದ ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಎಡಕಾಲು ನೇರವಾಗಿರಲಿ. ಈ ಸ್ಥಿತಿಯಲ್ಲಿ 20 ಸೆಕೆಂಡಿನಷ್ಟು ಸಮ ಉಸಿರಾಟ ನಡೆಸುತ್ತಾ ಮರಳಿ ಸ್ಥಿತಿಗೆ ಬನ್ನಿ. ಇದೇ ರೀತಿ ಎಡ ಭಾಗದಲ್ಲಿ ಅಭ್ಯಾಸ ಮಾಡಿ. ಅನಂತರ ತುಸು ವಿಶ್ರಾಂತಿ.

ಪ್ರಯೋಜನ: ವಕ್ರಾಸನ ಟ್ವಿಸ್ಟ್ ಜೀರ್ಣಾಂಗ ವ್ಯವಸ್ಥೆ ಕರುಳು, ಗರ್ಭಾಶಯ ಮತ್ತು ಮೂತ್ರಪಿಂಡದಂತಹ ಆಂತರಿಕ ಅಂಗಗಳನ್ನು ಉತ್ತೇಜಿಸುವ, ಜೀರ್ಣಕ್ರಿಯೆಯನ್ನು ಸುಧಾರಿಸುವ ಯೋಗ ಭಂಗಿಯಾಗಿದೆ. ದೇಹವು ತಿರುಚಿದಾಗ ಹೊಟ್ಟೆಯ ಕೆಳಭಾಗದಲ್ಲಿ ಸ್ವಲ್ಪ ಒತ್ತಡದ ಅನುಭವವಾಗುತ್ತದೆ. ಹೀಗಾಗಿ ಅಂತರಿಕವಾಗಿ ಅಂಗಗಳ ಮೇಲೆ ಕೆಲಸ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳು ಕೆಲಸ ಮಾಡಲು ಪ್ರಾರಂಭಿಸಿದಾಗ ಇದು ಥೈರಾಯ್್ದ

ಗ್ರಂಥಿಗಳನ್ನು ಸಕ್ರಿಯಗೊಳಿಸಿ ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಮತೋಲಿತ ಹಾರ್ವೇನ್ ಮಟ್ಟವನ್ನು ಖಚಿತಪಡಿಸುತ್ತದೆ. ಉಸಿರಾಟದ ಅರಿವಿನೊಂದಿಗೆ ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಎಲ್ಲಾ ಯೋಗ ಭಂಗಿಗಳಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ಯೋಗ ಭಂಗಿಯ ಸ್ಥಾನವನ್ನು ದೀರ್ಘಕಾಲದವರೆಗೆ ನಿರ್ವಹಿಸಿದರೆ ದೇಹವು ಹೆಚ್ಚು ಮೃದುವಾಗಿರುತ್ತದೆ. ಯೋಗಾಸನವು ಆರಾಮದಾಯಕವಾದಂತೆ, ಸ್ವಲ್ಪ ಸಮಯದವರೆಗೆ

ಆ ಸ್ಥಾನವನ್ನು ಹಿಡಿದಿಟ್ಟುಕೊಳ್ಳಲು ಕಲಿಯಬೇಕು. ಇದು ದೇಹದೊಳಗಿನ ರಕ್ತಪರಿಚಲನೆ ಮತ್ತು ಗಾಳಿಯ ಚಲನೆಯ ಪರಿಣಾಮವಾಗಿ ದೇಹದ ಆಂತರಿಕ ಅಂಗಗಳಿಗೆ ಪ್ರಯೋಜನವನ್ನು ನೀಡುತ್ತದೆ. ಬೆನ್ನು ಮೂಳೆಯ ಭಾಗವು ಎಳೆತಕ್ಕೆ ಒಳಗಾಗಿ

ಬೆನ್ನಿನ ನರಗಳು ಪುನಶ್ಚೇತನಗೊಳ್ಳುತ್ತದೆ. ಮಲಬದ್ಧತೆ ಮತ್ತು ಹೊಟ್ಟೆಯ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಈ ಆಸನದಲ್ಲಿ ತಿರುಚುವಿಕೆ ಆಗುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಬೆನ್ನು ಮೂಳೆಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಮತ್ತು ಕಶೇರು ಖಂಡಗಳ ಬಿಗಿತವನ್ನು ನಿವಾರಿಸುತ್ತದೆ. ಮಣಿಪುರ ಚಕ್ರವನ್ನು ಪ್ರಚೋದಿಸುತ್ತದೆ. ಮೂತ್ರದೋಷ

ಮತ್ತು ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಈ ಆಸನ ಉಪಯುಕ್ತವಾಗಿದೆ. ಹಾಗೂ ಕುತ್ತಿಗೆ, ಭುಜಗಳ, ಕೈಗಳ ನೋವು ನಿಯಂತ್ರಣವಾಗುತ್ತದೆ. ಅಡ್ರಿನಲ್ ಗ್ಲಾಂಡ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

ವಿಶೇಷ ಸೂಚನೆ: ತೀವ್ರವಾದ ಸಿಯಾಟಿಕಾ ಅಥವಾ ಸ್ಪಾಂಡಿಲೈಟಿಸ್ ಸಂದರ್ಭದಲ್ಲಿ ವಕ್ರಾಸನದ ಅಭ್ಯಾಸವನ್ನು ಮಾಡಬಾರದು. ಗರ್ಭಿಣಿಯರು ಈ ಭಂಗಿಯನ್ನು ಅಭ್ಯಾಸ ಮಾಡಬಾರದು. ಏಕೆಂದರೆ ಹೊಟ್ಟೆಯ ಸಂಕೋಚನ ಮತ್ತು ತಿರುವು ಅವರಿಗೆ ಆರಾಮದಾಯಕವಾಗಿರುವುದಿಲ್ಲ.

ಹರ್ನಿಯಾ, ಪೆಪ್ಟಿಕ್ ಅಲ್ಸರ್ ಸಮಸ್ಯೆ ಇದ್ದವರು ಹಾಗೂ ತುಂಬಾ ಸೊಂಟನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ. ಗುರುಮುಖೇನ ಆಸನವನ್ನು ಕಲಿಯಿರಿ.

(ಪ್ರತಿಕ್ರಿಯಿಸಿ: vvsudina@gmail.com)