ಬೆಂಗಳೂರು: ದಿಟ್ಟತೆಯ ಅನುಭಾವಗಳನ್ನು ನೀಡಿರುವ ವಚನಕಾರ್ತಿಯರನ್ನು ಪರಿಚಯಿಸುವ ವಚನ ನವರಾತ್ರಿ ಸಾಂಸ್ಕೃತಿಕ ಉತ್ಸವ ಅರಿವಿನ ಆಚರಣೆಯಾಗಿದೆ ಎಂದು ವಚನಜ್ಯೋತಿ ಬಳಗದ ಸಹ ಸಂಸ್ಥಾಪಕಿ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತ್ ಹೇಳಿದ್ದಾರೆ.
ನಗರದ ಕಲ್ಯಾಣ ಬಡಾವಣೆಯಲ್ಲಿ ವಚನಜ್ಯೋತಿ ಬಳಗ ಆಯೋಜಿಸಿರುವ ವಚನ ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
9 ಶತಮಾನಗಳ ಹಿಂದೆಯೇ ಅತ್ಯಂತ ಸರಳ ಕನ್ನಡದಲ್ಲಿ ತಮ್ಮ ಅನುಭಾವಗಳನ್ನು ಹಂಚಿದ ಬಸವಾದಿ ಪ್ರಮಥರು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ವಚನಗಳನ್ನು ನಮಗೆ ನೀಡಿದ್ದಾರೆ. ಕೇವಲ ನಾಲ್ಕು ವಚನಗಳನ್ನು ಪಾಲಿಸಿದರೆ ಬದುಕು ಸುಂದರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಚನ ಸಾಹಿತ್ಯವನ್ನು ವಿಶ್ಲೇಷಿಸಿದರು.
ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ನವರಾತ್ರಿಯನ್ನು ಇಡೀ ಭಾರತ ದೇಶ ಆಚರಿಸುತ್ತದೆ. ವಿವಿಧ ಭಾಗಗಳಲ್ಲಿ ವಿವಿಧ ಬಗೆಯಲ್ಲಿ ಆಚರಿಸಲಾಗುತ್ತದೆ. ಅಂತೆಯೇ ನಾವು ಅಪರೂಪವಾದ ವಚನ ನವರಾತ್ರಿ ಆಚರಿಸುತ್ತಿದ್ದೇವೆ. ಒಂಬತ್ತು ದೇವಿಯರ ಬದಲಾಗಿ ಒಂಬತ್ತು ಧೀರ ದಿಟ್ಟ ನಿಲುವಿನ ವಚನಕಾರ್ತಿಯರನ್ನು ವಚನ ಕಲಿಕಾ ವಿದ್ಯಾರ್ಥಿಗಳೇ ಪರಿಚಯಿಸಿ, ಅವರುಗಳ ಅನುಭಾವದ ವಚನಗಳ ನಿರ್ವಚನ ಪಡೆಯುವ ನವರಾತ್ರಿ ಆಚರಿಸುತ್ತಿದ್ದೇವೆ ಎಂದರು.
ಅಕ್ಕನ ಬಳಗದ ಸದಸ್ಯೆಯರು ವಚನ ಸಂಗೀತ ನಡೆಸಿಕೊಟ್ಟರು. ವಚನ ವಿಜಯದಶಮಿಯಂದು ಬಸವಣ್ಣನವರ ಪುತ್ಥಳಿ ಮತ್ತು ವಚನ ಸಂಪುಟಗಳನ್ನು ಹೊತ್ತು ಕಲ್ಯಾಣ ಬಡಾವಣೆಯ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಪಿಹೆಚ್‌ಡಿ ಪುರಸ್ಕೃತೆ ದರ್ಶಿನಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಧು ಶಿವಕುಮಾರ್, ಸುಜಾತ ಮೇಲೇಗೌಡರು, ಸರ್ವಾಣಿ ಯೋಗೇಶ್, ರಾಜಾ ಗುರುಪ್ರಸಾದ್, ಟಿ.ಎಂ. ಜಾನಕಿ, ದಿವ್ಯಾ ಉಮೇಶ್, ದಿವಾಕರ್, ಚನ್ನಮಲ್ಲಯ್ಯ, ಚಂದ್ರಶೇಖರಯ್ಯ, ಬಸವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.