ಬೆಂಗಳೂರು: 'ಕಳೆದ ಒಂದೂವರೆ ತಿಂಗಳಿನಿಂದ ನಿರುದ್ಯೋಗಿಯಾಗಿ ಕುಳಿತಿದ್ದೇನೆ. ರಾತ್ರಿ ನಿದ್ದೆಯಲ್ಲೂ ನಾನು ಶಾಸಕನಾಗುತ್ತೇನೆ ಎಂದು ಕನಸು ಕಾಣುವವರು ಇದ್ದಾರೆ. ಆದರೆ ನಾನು ಈ ಬಾರಿ ವಿಧಾನಸಭಾ ಚುನಾವಣೆಯನ್ನು ಸವಾಲಿನಿಂದ ಸ್ವೀಕರಿಸಿದವನು' ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಬಿಜೆಪಿಯ ಕಾನೂನು ಪ್ರಕೋಷ್ಠ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅನೇಕ ಪಕ್ಷದಲ್ಲಿ ದೊಡ್ಡ ದೊಡ್ಡ ಅನುಭವಿ ನಾಯಕರಿದ್ದಾರೆ. ಅವರ ಆದರ್ಶಗಳನ್ನು ಹಾಗೂ ಪಕ್ಷದ ಸಂದೇಶಗಳನ್ನ ಪಾಲಿಸುವುದು ಎಲ್ಲರ ಜವಾಬ್ದಾರಿ. ಗೋವಿಂದರಾಜನಗರದಲ್ಲಿ ಆಸ್ಪತ್ರೆ, ಶಾಲೆ, ಕಾಲೇಜು ಸೇರಿ 480 ಕೋಟಿ ರೂ.ಗೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ ಪಕ್ಷ ನೀಡಿದ ಟಾಸ್ಕ್ ಪೂರೈಸಲು ಕ್ಷೇತ್ರ ಬಿಟ್ಟು ಕೊಟ್ಟೆ. ಸದ್ಯ ಎರಡೂ ಕ್ಷೇತ್ರದಲ್ಲಿ ಸೋತು ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗದೇ ಹೋದಲ್ಲಿ ಲೋಕಸಭೆ ಚುನಾವಣೆಗೆ ಸೋಮಣ್ಣ ಜವಬ್ದಾರಿ ಏನು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ರಾಜ್ಯಾಧ್ಯಕ್ಷ ಸ್ಥಾನ ಕೊಡುವುದು/ಬಿಡುವುದು ಹೈಕಮಾಂಡ್ಗೆ ಬಿಟ್ಟದ್ದು. ನನಗೆ ಯಾವುದೇ ಮುಜುಗರ ಇಲ್ಲ. ಪಕ್ಷದಲ್ಲಿ ನನಗಿಂತ ಬುದ್ದಿವಂತರು ಇದ್ದಾರೆ. ನಾನು ಕೇವಲ ಪಕ್ಷ ಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.
ಚುನಾವಣೆಯಲ್ಲಿ ಸೋತ ಕಾರಣಕ್ಕೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ನಾನು ನಿದ್ರೆ ಮಾಡಲ್ಲ, ಇನ್ನೊಬ್ಬರಿಗೂ ನಿದ್ರೆ ಮಾಡಲು ಬಿಡಲ್ಲ. ಏನು ಕಳೆದುಕೊಂಡಿದ್ದೇನೋ ಅದನ್ನು ಪಡೆದುಕೊಳ್ಳುತ್ತೇನೆ. ಉಪ್ಪು ಖಾರ ಏನು ಹಾಕಬೇಕೋ ಹಾಕಿಕೊಳ್ಳಿ ಎನ್ನುತ್ತಾ ಸೋಮಣ್ಣ ಮಾರ್ಮಿಕವಾಗಿ ಉತ್ತರಿಸಿದರು.