ನ್ಯೂಸ್

ಡಾ. ವಿ.ಎಸ್. ಸೋಂದೆ ಇನ್ನಿಲ್ಲ

ಶಿರಸಿ: ಸಹಕಾರಿ, ಶಿಕ್ಷಣ, ಕೃಷಿ, ಸಾರ್ವಜನಿಕ ಆರೋಗ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಶಿರಸಿಯ ಡಾ. ವಿ.ಎಸ್. ಸೋಂದೆ (90) ಭಾನುವಾರ ನಿಧನರಾದರು. ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.

ಸುದೀರ್ಘ 68 ವರ್ಷ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸೋಂದೆ, ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್​ನಲ್ಲಿ 56 ವರ್ಷ ನಿರ್ದೇಶಕ, 33 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಪಂಡಿತ ಜನರಲ್ ಲೈಬ್ರರಿಯ ಅಧ್ಯಕ್ಷ, ಉತ್ತರ ಕನ್ನಡ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಸ್ಥಾಪಕ ಸದಸ್ಯ, ರೋಟರಿ ಕ್ಲಬ್ ಶಿರಸಿ ಘಟಕದ ಸಂಸ್ಥಾಪಕ ಸದಸ್ಯ, ನಗರಸಭೆ ಸದಸ್ಯ, ಜಿಲ್ಲಾ ಸೈನಿಕ ಬೋರ್ಡ್ ಸದಸ್ಯ, ಶಿರಸಿ ಸರ್ಕಾರಿ ಆಸ್ಪತ್ರೆಯ ಸಂದರ್ಶಕ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

1983ರಲ್ಲಿ ನಡೆದ ಅಖಿಲ ಭಾರತ 55ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿದ್ದರು. ಜಿಲ್ಲಾ ಕೊಂಕಣಿ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 20ನೇ ಕೊಂಕಣಿ ಸಾಹಿತ್ಯ ಸಮ್ಮೇಳನ ಮತ್ತು ಕೊಂಕಣಿ ಮಹಿಳಾ ಸಮ್ಮೇಳನದ ಜವಾಬ್ದಾರಿ ವಹಿಸಿಕೊಂಡಿದ್ದರು. ಶಿರಸಿ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಶ್ರೀ ರಾಮಕೃಷ್ಣ ಆಶ್ರಮದ ಧರ್ಮದರ್ಶಿ ಮಂಡಳಿ ಸದಸ್ಯರಾಗಿ ಸೇವೆಗೈದಿದ್ದಾರೆ.

ಇವರ ಸಾಧನೆ ಗುರುತಿಸಿ ಕರ್ನಾಟಕ ವಿವಿ ಗೌರವ ಡಾಕ್ಟರೇಟ್, 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ವಿದ್ಯಾಧಿರಾಜ ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿ, 2012ರಲ್ಲಿ ವಿ.ಆರ್. ದೇಶಪಾಂಡೆ ಟ್ರಸ್ಟ್ ವತಿಯಿಂದ ಲೈಫ್ ಅಚೀವ್​ವೆುಂಟ್ ಅವಾರ್ಡ್ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.