ನ್ಯೂಸ್

ಉತ್ಥಾನ ಮಾಸಪತ್ರಿಕೆಯ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ ಫಲಿತಾಂಶ ಪ್ರಕಟ

ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ ಹೆಗಡೆಕಟ್ಟಾ ಅವರ ‘ಒಂದು ಸಂಸ್ಕಾರದ ಕಥೆ’ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಈ ವರ್ಷ 398 ಕಥೆಗಳು ಸ್ಪರ್ಧೆಯಲ್ಲಿದ್ದು, ಅಂಕಣಕಾರ ಪ್ರೇಮಶೇಖರ ಅವರು ಬಹುಮಾನಕ್ಕೆ ಕಥೆಗಳನ್ನು ಆಯ್ಕೆ ಮಾಡಿದ್ದಾರೆ. ಪ್ರಥಮ ಬಹುಮಾನ 15 ಸಾವಿರ ರೂ. ನಗದು ಒಳಗೊಂಡಿದೆ.

ಯಾದಗಿರಿಯ ಶಿವವಿಷ್ಣು ವಲ್ಲಭ ಅವರ ‘ಜಂಬುಕೇಶನ ಮತಾಂತರ ಪ್ರಹಸನ’ವು ದ್ವಿತೀಯ ಬಹುಮಾನ ಹಾಗೂ ಕಾಸರಗೋಡಿನ ಸಂತೋಷ್ ಅನಂತಪುರ ಅವರ ‘ಭೂತ ಪಾದ ಕಥೆ’ ತೃತೀಯ ಬಹುಮಾನವನ್ನು ಪಡೆದಿದೆ. ಈ ಬಹುಮಾನಗಳು ಕ್ರಮವಾಗಿ 12 ಸಾವಿರ ಹಾಗೂ 10 ಸಾವಿರ ನಗದು ಒಳಗೊಂಡಿವೆ.

ಉಡುಪಿಯ ಶ್ರೀಲೋಲ ಸೋಮಯಾಜಿ ಅವರ‘ ಇರ್ಬುಸಾಬಿಯ ಅಷ್ಟಾವಧಾನ ಸೇವೆ’, ಬೆಂಗಳೂರಿನ ಜಯರಾಮಚಾರಿ ಅವರ ‘ಪೊಮ್ಯಾಟೋ’, ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿ ಅವರ ‘ಋಣವೆಂಬ ಗೂಢ’, ಚಿತ್ರದುರ್ಗದ ಜಿ.ಎಂ. ಸಂಜಯ್ ಅವರ ‘ಉದ್ಭವ ಸೇತುವೆ’ ಹಾಗೂ ಮೈಸೂರಿನ ಮಾಲತಿ ಹೆಗಡೆ ಅವರ ‘ನೆಲೆ ಕಥೆ’ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಬಹುಮಾನವು ತಲಾ 2 ಸಾವಿರ ರೂ. ನಗದು ಒಳಗೊಂಡಿವೆ ಎಂದು ಉತ್ಥಾನದ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ ತಿಳಿಸಿದ್ದಾರೆ.