ನ್ಯೂಸ್

10 ಅಡಿ ಗುಂಡಿ, ಸುಳ್ಳಿನ ಸರಮಾಲೆ; ಸೊಸೆ ಕೊಲೆಗೆ ಮಾವನೇ ಕಾರಣ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ | Murder Case

Murder Case: ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದ ಯುವತಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯ ಮೃತದೇಹ ಪತ್ತೆಯಾಗಿದೆ. ಶವ ಆಕೆಯ ಗಂಡನ ಮನೆಯ ಮುಂದಿದ್ದ ರಸ್ತೆಯ 10 ಅಡಿ ಗುಂಡಿಯಲ್ಲಿತ್ತು ಎಂಬುದೇ ಸದ್ಯ ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ. ತನಿಖೆ ಮೂಲಕ ಆರೋಪಿಗಳಿಂದ ಸತ್ಯಾಸತ್ಯತೆ ಬಾಯ್ಬಿಡಿಸಿರುವ ಪೊಲೀಸರು, ಯುವತಿಯ ಗಂಡ, ಅತ್ತೆ-ಮಾವ ಮತ್ತು ಓರ್ವ ಸಂಬಂಧಿಯನ್ನು ಬಂಧಿಸಿದ್ದಾರೆ.

ಮಾವನೇ ಕೊಲೆಗಡುಕ!

ಮೃತ ಯುವತಿಯನ್ನು ತನು ಸಿಂಗ್ (24) ಎಂದು ಗುರುತಿಸಲಾಗಿದೆ. 2023ರಲ್ಲಿ ಫರಿದಾಬಾದ್ ಮೂಲದ ಅರುಣ್ ಸಿಂಗ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತನು, ಮದುವೆಯಾದ ಕೆಲವೇ ತಿಂಗಳಲ್ಲಿ ಅತ್ತೆ ಮನೆಯವರ ವರದಕ್ಷಿಣೆ ಕಾಟಕ್ಕೆ ಬೇಸತ್ತಿದ್ದಳು. ಅತ್ತೆ-ಮಾವ ಮತ್ತು ಗಂಡನ ಹಣದ ದಾಹಕ್ಕೆ ಕುಗ್ಗಿದ್ದಳು. ವಿಪರೀತ ಮಾನಸಿಕ ಹಿಂಸೆಯೂ ಅನುಭವಿಸಿದ್ದಳು. ಈ ವಿಚಾರದಿಂದ ಬೇಸರಗೊಂಡು ತವರು ಮನೆಗೂ ಹೋಗಿದ್ದಳು. ಆದ್ರೆ, ಕಳೆದ ಎರಡು ತಿಂಗಳಿಂದ ಯಾರ ಕಣ್ಣಿಗೂ ಬೀಳದ ತನು ಬಗ್ಗೆ ಆಕೆಯ ಸಹೋದರಿ ಪ್ರೀತಿ, ಅಕ್ಕನ ಪತಿ ಮನೆಯವರ ವಿರುದ್ಧ ದೂರು ನೀಡಿದ್ದೇ ತಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮನೆಯ ಎದುರಿಗಿನ ರಸ್ತೆಯ 10 ಅಡಿ ಗುಂಡಿಯಲ್ಲಿ ತನು ಮೃತದೇಹ ಕೊಳೆತ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಇಂದು (ಜೂ.21) ಬೆಳಗ್ಗೆ 8 ಗಂಟೆಗೆ ಮೃತದೇಹವನ್ನು ವಶಪಡಿಸಿಕೊಂಡ ಖಾಕಿ ಪಡೆ, ಸಾವಿನ ನಿಖರವಾದ ಸಮಯ ಮತ್ತು ಕಾರಣವನ್ನು ಖಚಿತಪಡಿಸಿಕೊಳ್ಳಲು ದೇಹವನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆ ಪ್ರಕರಣದಡಿ ಸದ್ಯ ಮೃತ ತನು ಅವರ ಪತಿ, ಅತ್ತೆ, ಮಾವ ಮತ್ತು ಓರ್ವ ಸಂಬಂಧಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.

ಕೊಲೆ ಸತ್ಯ ಕಕ್ಕಿದ ಮಾವ

ಮೃತ ತನು ಮಾವನನ್ನು ತನಿಖೆಗೆ ಒಳಪಡಿಸಿದ ಖಾಕಿ ಕಡೆಗೂ ಆತನ ಬಾಯಿಂದ ಸತ್ಯ ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನು ಮಾವ ಭೂಪ್ ಸಿಂಗ್ ತಾನೇ ಕೊಲೆ ಮಾಡಿದ್ದು ಎಂದು ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಏಪ್ರಿಲ್ 21-22ರ ತಡರಾತ್ರಿ, ಭೂಪ್ ಸಿಂಗ್, ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಸೊಸೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಆ ಸಮಯದಲ್ಲಿ ಅವನ ಹೆಂಡತಿ ಸೋನಿಯಾ ಮತ್ತು ಮಗ ಅರುಣ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಕೊಲೆಗೈದ ಬಳಿಕ ಶವವನ್ನು ಮನೆ ಮುಂದೆ ಪಾಲಿಕೆಯವರು ಅಗೆದಿದ್ದ ಗುಂಡಿಯಲ್ಲಿ ಹೂತಿದ್ದಾಗಿ ಹೇಳಿದ್ದಾನೆ,(ಏಜೆನ್ಸೀಸ್).ಇದನ್ನೂ ಓದಿ: ಗ್ಯಾರಂಟಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ, ಸರ್ಕಾರದ ಯೋಜನೆ ಜನಸಾಮಾನ್ಯರಿಗೆ ಆಸರೆ ಎಂದ ಪಾಟೀಲ

ಸ್ಥಳೀಯರೇ ಸುಳಿವು

ಗಂಡನ ಮನೆಗೆ ಹೋದ ಬಳಿಕ ಚಿನ್ನಾಭರಣ ಮತ್ತು ಹಣ ತೆಗೆದುಕೊಂಡು ಬರುವಂತೆ ತನುಗೆ ಆಕೆಯ ಅತ್ತೆ ಮನೆಯವರು ಪದೇ ಪದೇ ಹಿಂಸಿಸುತ್ತಿದ್ದರು. ಈ ಬಗ್ಗೆ ಅಕ್ಕ ನಮ್ಮಲ್ಲಿ ದೂರಿದ್ದಳು. ವರದಕ್ಷಿಣೆ ವಿಚಾರವಾಗಿ ಆಕೆಯ ಗಂಡ, ಅತ್ತೆ ಮತ್ತು ಮಾವ ತೀರ ಮಾನಸಿಕ ಹಿಂಸೆ ಕೊಡುತ್ತಿದ್ದರು. ಇದೇ ವಿಷಯಕ್ಕೆ ಅವಳು ಗಂಡನ ಮನೆಬಿಟ್ಟು ಕೆಲವು ದಿನಗಳ ಕಾಲ ತವರಿಗೆ ಬಂದಿದ್ದಳು. ಅವರು ಅವಳಿಗೆ ನಮ್ಮ ಜೊತೆ ಫೋನ್ ಕಾಲ್, ಸಂದೇಶ ಕಳಿಸಲು ಅನುಮತಿ ಕೊಡುತ್ತಿರಲಿಲ್ಲ. ಇದರಿಂದ ಸಹೋದರಿ ತೀರ ಬೇಸತ್ತಿದ್ದಳು. ಒಂದಷ್ಟು ಧೈರ್ಯ ಮತ್ತು ಬುದ್ಧಿ ಮಾತುಗಳನ್ನೇಳಿ, ಅವಳನ್ನು ತವರಿಗೆ ವಾಪಾಸ್ ಕಳಿಸಿದ್ದೆವು. ಆದ್ರೆ, ಹಿಂಸೆ ಮತ್ತೇ ಮುಂದುವರಿದಿತ್ತು. ಏಪ್ರಿಲ್​ನಲ್ಲಿ ಆಕೆಯ ಸುಳಿವು ನಮಗೆ ಸಿಗಲಿಲ್ಲ ಎಂದು ಪ್ರೀತಿ ಹೇಳಿದ್ದಾರೆ.

ಏನಿದು ಘಟನೆ?

ಹರಿಯಾಣದ ಫರಿದಾಬಾದ್‌ನ ವಸತಿ ಬೀದಿಯೊಂದರಲ್ಲಿ 10 ಅಡಿ ಆಳದ ಗುಂಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಮೃತ ಯುವತಿಯನ್ನು ಉತ್ತರ ಪ್ರದೇಶದ ಶಿಕೋಹಾಬಾದ್ ನಿವಾಸಿ ತನು (24) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆಯಷ್ಟೇ ಫರಿದಾಬಾದ್‌ನ ರೋಶನ್ ನಗರದ ನಿವಾಸಿ ಅರುಣ್ ಎಂಬಾತನನ್ನು ಮದುವೆಯಾಗಿದ್ದ ಯುವತಿ, ಇದೀಗ ಕೊಲೆಯಲ್ಲಿ ದುರಂತ ಅಂತ್ಯ ಕಂಡಿರುವುದು ಸದ್ಯ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಪೊಲೀಸರ ಮಾಹಿತಿ ಪ್ರಕಾರ, ಗಂಡನ ಮನೆಯಲ್ಲಿದ್ದ ತನು, ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದಳು. ಇದನ್ನು ಪ್ರಶ್ನಿಸಿದ್ದ ತನು ಸಹೋದರಿ ಪ್ರೀತಿ, ನನ್ನ ಅಕ್ಕ ಕರೆಗೆ ಮತ್ತು ಸಂದೇಶಗಳಿಗೆ ಸ್ಪಂದಿಸುತ್ತಿಲ್ಲ. ನಿಮ್ಮ ಮನೆಯಲ್ಲಿದ್ದ ಅವಳು ಎಲ್ಲಿ ಹೋದಳು ಎಂದು ಪ್ರಶ್ನಿಸಿದ್ದಳು. ಇದಕ್ಕೆ ಉತ್ತರಿಸಿದ ಆಕೆಯ ಅತ್ತೆ, ಅವಳು ಯಾರೊಂದಿಗೋ ಮನೆಬಿಟ್ಟು ಓಡಿ ಹೋಗಿದ್ದಾಳೆ ಎಂಬ ಕಟು ಮಾತುಗಳನ್ನಾಡಿದ್ದರು. ಇದರಿಂದ ಕುಪಿತಗೊಂಡ ಪ್ರೀತಿ, ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​ ದಾಖಲಿಸಿದ್ದರು. ಅಂತೆಯೇ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಯುವತಿಯ ಅತ್ತೆ ಮನೆಯವರೇ ಕೊಲೆಗಡುಕರು ಎಂಬುದು ತನಿಖೆ ಮೂಲಕ ಸಾಬೀತಾಯಿತು.