ನ್ಯೂಸ್

ಉತ್ತರಕಾಶಿ ಮೇಘಸ್ಪೋಟ 650 ಜನರ ರಕ್ಷಣೆ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನದ ಮೇಳೆಗೆ 250 ಜನರನ್ನು ರಕ್ಷಿಸಲಾಗಿದ್ದು, ರಕ್ಷಿಸಲ್ಪಟ್ಟ ಒಟ್ಟು ಜನರ ಸಂಖ್ಯೆ 650ಕ್ಕೆ ಏರಿದೆ. ಭಾರತೀಯ ಸೇನೆ, ಐಟಿಬಿಪಿ, ಎನ್​ಡಿಆರ್​ಎಫ್ ಸೇರಿ ಹಲವು ರಕ್ಷಣಾ ತಂಡಗಳ 800ಕ್ಕೂ ಹೆಚ್ಚು ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಡ್ರೋನ್​ಗಳು, ಶ್ವಾನದಳ ಬಳಸಿಕೊಂಡು ನಾಪತ್ತೆಯಾದವರಿಗಾಗಿ, ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೇಘಸ್ಪೋಟದಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಸಿಲುಕಿ ನಾಲ್ವರು ಮೃತಪಟ್ಟಿದ್ದು, ಇಬ್ಬರ ಶವ ಬುಧವಾರ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ ಮತ್ತು ವಾಯುಪಡೆಯ 2 ಚಿನೋಕ್, 2 ಎಂಐ-17 ಎಸ್ ಮತ್ತು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ 8 ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು 355 ಜನರನ್ನು ಹರ್ಸಿಲ್​ನಿಂದ ದಕ್ಷಿಣ ಉತ್ತರಕಾಶಿಯ ಮಟ್ಲಿಯಲ್ಲಿರುವ ಐಟಿಬಿಪಿ ಹೆಲಿಪ್ಯಾಡ್​ಗೆ ಕರೆತರಲಾಯಿತು. ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಮತ್ತು ಪ್ರವಾಸಿಗರನ್ನು ರಕ್ಷಿಸಲು ಭಾಗೀರಥಿ ನದಿಗೆ ಸೇತುವೆ ನಿರ್ವಿುಸಲಾಗುತ್ತಿದೆ. ಘಟನಾ ಸ್ಥಳದಿಂದ ರಕ್ಷಿಸಿದವರು ತಮ್ಮ ಕುಟುಂಬಸ್ಥರನ್ನು ಸಂರ್ಪಸಲು ಸಾಧ್ಯವಾಗುವಂತೆ ಸ್ಯಾಟಲೈಟ್ ಫೋನ್, ರೇಡಿಯೋ ರಿಲೇ ವ್ಯವಸ್ಥೆ ಬಳಸಿಕೊಳ್ಳಲಾಗುತ್ತಿದೆ ಎಂದು ಭಾರತೀಯ ಸೇನೆ ಲೆಫ್ಟಿನೆಂಟ್ ಜನರಲ್ ಡಿ.ಜಿ. ಮಿಶ್ರಾ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಕೆಸರನ್ನು ತೆರವುಗೊಳಿಸುವುದು ಸವಾಲಾಗಿದೆ. ಕೆಲ ಸ್ಥಳಗಳಲ್ಲಿ 50-60 ಅಡಿಯಷ್ಟು ಕಲ್ಲು ಬಂಡೆಗಳು ಮತ್ತು ಕೆಸರು ನಿಂತಿದ್ದು, ಕಾರ್ಯಾಚರಣೆ ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆ ಆದವರು ಅಧಿಕ?

ದುರಂತದಲ್ಲಿ ಭಾರತೀಯ ಸೇನೆಯ 9 ಜನರು ಮತ್ತು 7 ನಾಗರಿಕರು ಸೇರಿ 16 ಜನರು ಕಾಣೆಯಾಗಿದ್ದಾರೆ ಎಂದು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಧರಾಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಹೋಟೆಲ್​ಗಳು ಮತ್ತು ಗೆಸ್ಟ್ ಹೌಸ್​ಗಳಲ್ಲಿ ಬಿಹಾರ ಮತ್ತು ನೇಪಾಳ ಮೂಲದ ವಲಸೆ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿ ಧರಾಲಿಯಲ್ಲಿ ಹೆಚ್ಚಿನ ಪ್ರವಾಸಿಗರು ಉಳಿದುಕೊಳ್ಳುತ್ತಿದ್ದರು. ದಿಢೀರ್ ಪ್ರವಾಹ ಸಂಭವಿಸಿದಾಗಲೂ ಹಾನಿಗೊಳದಾಗ ಹೋಟೆಲ್​ಗಳಲ್ಲಿ ಸಾಕಷ್ಟು ಪ್ರವಾಸಿಗರು ತಂಗಿದ್ದರು. ಹಾಗಾಗಿ ನಾಪತ್ತೆಯಾಗಿರುವವರ ಸಂಖ್ಯೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.