ನ್ಯೂಸ್

ಈ ವಿವಿ ಪದವಿ ಪಡೆಯೋದಕ್ಕೆ ಕೇಸರಿ ಶಾಲು ಕಡ್ಡಾಯ ಮಾಡಿತ್ತಾ? ನಿಜಾಂಶ ಇಲ್ಲಿದೆ ನೋಡಿ...

Mandara

ಡೆಹ್ರಡೂನ್​: ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಕನ್ವೋಕೇಷನ್​ ದಿನದ ಫೋಟೋಗಳು ವೈರಲ್​ ಆಗಿದ್ದವು. ಉತ್ತರಾಂಚಲ್​ ವಿಶ್ವವಿದ್ಯಾಲಯವು ಅದರ ಕನ್ವೋಕೇಷನ್​ ದಿನಕ್ಕೆ ವಿದ್ಯಾರ್ಥಿಗಳಿಗೆ ಕಪ್ಪು ಕೋಟು, ಕಪ್ಪು ಹ್ಯಾಟ್​ನ ಬದಲಾಗಿ ಕೇಸರಿ ಶಾಲು ಧರಿಸುವಂತೆ ಹೇಳಿತ್ತು ಎಂದು ಫೋಟೋದ ಜತೆ ಮಾಹಿತಿ ಹಂಚಲಾಗಿತ್ತು. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಇದೀಗ ತಿಳಿದುಬಂದಿದೆ.

ವೈರಲ್​ ಆದ ಫೋಟೋಗಳು ಉತ್ತರಾಂಚಲ್​ ವಿಶ್ವವಿದ್ಯಾಲಯದ್ದೇ. ಆದರೆ ಆ ಫೋಟೋ ಈ ವರ್ಷದ್ದಲ್ಲ. ಕಳೆದ ವರ್ಷ ಫೆಬ್ರವರಿ 29ರಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾನ್ವೋಕೇಷನ್​ ದಿನದ ಫೋಟೋಗಳವು. ಆ ಫೋಟೋಗಳನ್ನು ವಿವಿ ತನ್ನ ಟ್ವಿಟ್ಟರ್​ ಖಾತೆಯಲ್ಲೂ ಹಂಚಿಕೊಂಡಿದೆ. ಆದರೆ ಅಲ್ಲಿ ಕೇವಲ ಕೇಸರಿ ಶಾಲನ್ನು ಧರಿಸಿದ ವಿದ್ಯಾರ್ಥಿಗಳು ಮಾತ್ರವಲ್ಲ, ನೀಲಿ, ಮೆರೂನ್​ ಬಣ್ಣದ ಶಾಲುಗಳನ್ನೂ ಧರಿಸಿದ್ದಾರೆ.

ವಿವಿಯ ವಿದ್ಯಾರ್ಥಿಗಳು ಕಾನ್ವೋಕೇಷನ್​ಗೆ ಆ ರೀತಿಯ ಡ್ರೆಸ್​ ಹಾಕಿದ್ದರು. ಆದರೆ ಕೇಸರಿ ಅಥವಾ ಯಾವುದೇ ಬಣ್ಣವನ್ನು ಹಾಕಬೇಕು ಎಂದು ಆದೇಶವಿರಲಿಲ್ಲ. ಆಯಾ ವಿಭಾಗದವರು ಬಣ್ಣ ನಿರ್ಧರಿಸಿಕೊಂಡು ಬಂದಿದ್ದರು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)