ಉತ್ತರಾಖಂಡ: ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸಬೇಕೇ ಬೇಡವೇ ಎನ್ನುವ ಕುರಿತು ಕರ್ನಾಟಕದಲ್ಲಿ ಬಹಳಷ್ಟು ಸಮಯದಿಂದ ಪರ-ವಿರೋಧ ಅಭಿಪ್ರಾಯಗಳು ಚರ್ಚೆಯಲ್ಲಿವೆ. ಈ ಮಧ್ಯೆ ಇಲ್ಲೊಂದು ಕಡೆ ಭಗವದ್ಗೀತೆ ಮಾತ್ರವಲ್ಲದೆ ವೇದ-ಉಪನಿಷತ್ತುಗಳನ್ನೂ ಪಠ್ಯದಲ್ಲಿ ಸೇರಿಸಲು ಮುಂದಾಗಿದ್ದಾರೆ.
ಹೌದು.. ಉತ್ತರಾಖಂಡದ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪರೀಕ್ಷಾ ಪರ್ವ್ 4.0 ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತ ಶಿಕ್ಷಣ ಸಚಿವರು ಈ ವಿಷಯನ್ನು ತಿಳಿಸಿದರು.
ಉತ್ತರಾಖಂಡ ಸರ್ಕಾರವು ಭಗವದ್ಗೀತೆ, ವೇದ ಹಾಗೂ ಉಪನಿಷತ್ತುಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ಚಿಂತನೆ ನಡೆಸಿದೆ ಎಂದು ಇಂದು ತಿಳಿಸಿರುವ ಅವರು, ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನೂ ಆಹ್ವಾನಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಅಲ್ಲದೆ ನೂತನ ಶಿಕ್ಷಣ ನೀತಿ ಅನುಸಾರ ಪಠ್ಯವನ್ನು ತಯಾರಿಸಲು ನಾಳೆ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಪಠ್ಯದಲ್ಲಿ ಭಗವದ್ಗೀತೆ, ವೇದ, ಉಪನಿಷತ್ತುಗಳನ್ನು ಸೇರಿಸುವ ಕುರಿತು ಕೂಡ ಚರ್ಚೆ ನಡೆಯಲಿದೆ.