ಡೆಹ್ರಾಡೂನ್ : ಉತ್ತರಾಖಂಡದ 10 ನೇ ಮುಖ್ಯಮಂತ್ರಿಯಾಗಿದ್ದ ತೀರಥ್ ಸಿಂಗ್ ರಾವತ್ ಅವರ ರಾಜೀನಾಮೆಯ ನಂತರ ಇಂದು ಮುಂದಿನ ಸಿಎಂ ಯಾರಾಗಬೇಕೆಂದು ತಿರ್ಮಾನಿಸುವುದಕ್ಕೆ ಡೆಹ್ರಾಡೂನಿನಲ್ಲಿ ಬಿಜೆಪಿ ಶಾಸಕರ ಸಭೆ ನಡೆಯಲಿದೆ. ಮುಂದಿನ ಸಿಎಂಗಿರಿಗೆ ಸೂಚಿಸಲ್ಪಡುತ್ತಿರುವ ಹೆಸರುಗಳೆಂದರೆ, ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಶಾಸಕರಾದ ಸತ್ಪಾಲ್ ಮಹರಾಜ್, ಧನ್ ಸಿಂಗ್ ರಾವತ್ ಮತ್ತು ಪುಷ್ಕರ್ ಸಿಂಗ್ ಧಾಮಿ ಎನ್ನಲಾಗಿದೆ.
ತೀರಥ್ ಸಿಂಗ್ ಅವರು ನಾಲ್ಕು ತಿಂಗಳ ಕೆಳಗಷ್ಟೆ ಸಿಎಂ ಆಗಿದ್ದರೂ, ಪಕ್ಷದ ರಾಜ್ಯ ಘಟಕದಲ್ಲಿನ ಒಳಜಗಳದಿಂದಾಗಿ ಅವರಿಗೆ ಹುದ್ದೆಯಿಂದ ಕೆಳಗಿಳಿಯುವಂತೆ ಬಿಜಿಪಿ ವರಿಷ್ಠರು ಹೇಳಿದ್ದಾರೆ ಎನ್ನಲಾಗಿದೆ. ಉತ್ತರಾಖಂಡದ ಸಂಸದರಾಗಿದ್ದ ತೀರಥ್ ಸಿಂಗ್ ಮಾರ್ಚ್ನಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಸೆಪ್ಟೆಂಬರ್ 10 ರೊಳಗೆ ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಬೇಕಿತ್ತು.
ಇನ್ನೇನು ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಬೇಕಾದ ರಾಜ್ಯದಲ್ಲಿ ಈಗ ಸದ್ಯಕ್ಕೆ ಕರೊನಾದಿಂದ ಉಪಚುನಾವಣೆ ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದು ತೀರಥ್ ಸಿಂಗ್ರನ್ನು ಕೈಬಿಡುವ ನಿರ್ಧಾರಕ್ಕೆ ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.
ಬಿಜೆಪಿಯ 57 ಶಾಸಕರು ಪಕ್ಷದ ಕೇಂದ್ರೀಯ ವೀಕ್ಷಕ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ರಾಜ್ಯ ಉಸ್ತುವಾರಿ ದುಷ್ಯಂತ್ ಕುಮಾರ್ ಗೌತಮ್ ಅವರ ಉಪಸ್ಥಿತಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ಸೇರಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಸಿಎಂ ಬಗೆಗಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಬಿಜೆಪಿ ಮುಖ್ಯಸ್ಥ ಮದನ್ ಕೌಶಿಕ್ ಹೇಳಿದ್ದಾರೆ. (ಏಜೆನ್ಸೀಸ್)