ಡೆಹರಾಡೂನ್: ಫೆಬ್ರವರಿ 8 ರಂದು ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಬಂಡೆ ಸ್ಫೋಟದಿಂದ ಉಂಟಾದ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಅಧಿಕೃತ ಸಂಖ್ಯೆಯನ್ನು ಉತ್ತರಾಖಂಡ್ ಸರ್ಕಾರ ಖಚಿತಪಡಿಸಿದೆ.
ಘಟನೆ ನಂತರ ಎನ್ಡಿಆರ್ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಾರ್ಯಾಚರಣೆಯಲ್ಲಿ ಇದುವರೆಗೆ 61 ಶವಗಳು ಮಾತ್ರ ದೊರಕಿದ್ದವು 136 ಜನರು ಕಣ್ಮರೆಯಾಗಿದ್ದರು. ಇದೀಗ ಉತ್ತರಾಖಂಡ್ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಘಟನೆಯಲ್ಲಿ ಕಣ್ಮರೆಯಾಗಿದ್ದ 136 ಜನರೂ ಮೃತಪಟ್ಟಿದ್ದಾರೆ ಎಂದು ಹೇಳಿದೆ. ಈ ಮೂಲಕ ಘಟನೆಯಲ್ಲಿ ಒಟ್ಟು 196 ಜನ ಮೃತಪಟ್ಟಂತಾಗಿದೆ.
ಫೆ 8 ರಂದು ಚಮೋಲಿ ಜಿಲ್ಲೆಯ ದೌಲಿಗಂಗಾ ಬಳಿ ಹಿಮಬಂಡೆ ಸ್ಪೋಟಗೊಂಡ ಪರಿಣಾಮ ದೌಲಿಗಂಗಾ, ಅಲಕಾನಂದ ನದಿಯಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿತ್ತು. ನದಿ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದ 196 ಜನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಸತ್ತವರ ಶವಗಳಿಗಾಗಿ ಹುಡುಕಾಟ ಮುಂದುವರೆದಿದೆ.