ಉತ್ತರಖಂಡ:
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ರುದ್ರಪ್ರಯಾಗ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ಅವರು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನೂ ನಡೆಸಿದರು.
ಚಾರ್‌ಧಾಮ್ ಯಾತ್ರೆ ಮಾರ್ಗಕ್ಕೆ ಸಂಬಂಧಿಸಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ವಿಚಾರಿಸಿದರು. ಯಾತ್ರೆ ಆರಂಭಿಸಲು ಎಲ್ಲ ಇಲಾಖೆಗಳು ಕೈಗೊಂಡಿರುವ ಪ್ರಯತ್ನ ಹಾಗೂ ಸಿದ್ಧತೆಗಳ ಬಗ್ಗೆಯೂ ವಿಚಾರಿಸಿದರು. ಪೀಡಿತ ಪ್ರದೇಶಗಳಲ್ಲಿ ಜನಜೀವನವನ್ನು ಸಾಮಾನ್ಯಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾನಿಗೊಳಗಾದ ಮಾರ್ಗಗಳು, ಕುಡಿಯುವ ನೀರು ಮತ್ತು ವಿದ್ಯುತ್ ಮಾರ್ಗಗಳನ್ನು ಆದಷ್ಟು ಬೇಗ ಪುನರ್‌ಸ್ಥಾಪಿಸಬೇಕು. ಕೇದಾರನಾಥ ಧಾಮ ಪಾದಚಾರಿ ಮಾರ್ಗವನ್ನು ಶೀಘ್ರ ಆರಂಭಿಸಬೇಕು. ಕೂಡಲೇ ಹೆಲಿಕಾಪ್ಟರ್ ಸೇವೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿದರು.
ಹೆಲಿಕಾಪ್ಟರ್ ಸೇವೆಯ ಮೂಲಕ ದರ್ಶನಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇದನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದರು.
ರಾಂಪುರ ಜಿಎಂವಿಎನ್‌ನಲ್ಲಿ ಸ್ಥಳೀಯ ಜನರೊಂದಿಗೆ ಸಂವಾದದ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರ ಮತ್ತು ಆಡಳಿತ ನಡೆಸಿದ ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯ ಜನರು ನೀಡಿದ ಸಹಕಾರಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು.