ಲಖನೌ: ಡಾನ್ಸ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಂದಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಬಹುತೇಕರಿಗೆ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ವಿಡಿಯೋ ಕ್ರೇಜ್ ಅಂತೂ ಸರ್ವೆ ಸಾಮಾನ್ಯ ಎನ್ನುವಂತಿದೆ. ಅವಕಾಶ ಸಿಕ್ಕಾಗಲೆಲ್ಲ ಡಾನ್ಸ್ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ರಾತ್ರೋರಾತ್ರಿ ಸೆಲೆಬ್ರಿಟಿ ಆಗಬೇಕೆಂಬ ಕನಸು ಹೊಂದಿರುತ್ತಾರೆ. ಲೈಕ್ಸ್, ಶೇರ್ಗಾಗಿ ಸೊಂಟ ಬಳುಕಿಸುತ್ತಾರೆ. ಆದರೆ, ಅದೇ ವಿಡಿಯೋ ಕ್ರೇಜ್ ಕೆಲವೊಮ್ಮೆ ವಿವಾದ ಸಹ ಸೃಷ್ಟಿ ಮಾಡುತ್ತದೆ ಎಂಬುದು ಪರಮ ಸತ್ಯವಾಗಿದ್ದು, ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.
ಮೂವರು ಮಹಿಳಾ ಕಾನ್ಸ್ಟೇಬಲ್ಗಳು ಸಿನಿಮಾ ಹಾಡಿಗೆ ಹೆಜ್ಜೆ ಹಾಕುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಾಗಾದರೆ, ಪೊಲೀಸ್ ಆದ ಮಾತ್ರಕ್ಕೆ ಡಾನ್ಸ್ ಮಾಡಬಾರದಾ? ಡಾನ್ಸ್ ಮಾಡಿದರೆ ತಪ್ಪೇನಿದೆ? ಎಂಬ ಪ್ರಶ್ನೆ ಮೂಡಬಹುದು. ಡಾನ್ಸ್ ಮಾಡಿದರೆ ತಪ್ಪೇನಿಲ್ಲ. ಆದರೆ, ಡಾನ್ಸ್ ಮಾಡುವ ಜಾಗ ಯಾವುದು ಎಂಬುದರ ಅರಿವು ಇರಬೇಕು. ಮೂವರು ಮಹಿಳಾ ಕಾನ್ಸ್ಟೇಬಲ್ಗಳು ಪೊಲೀಸ್ ಠಾಣೆಯಲ್ಲೇ ಸೊಂಟ ಬಳಕಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಲೇಡಿ ಕಾನ್ಸ್ಟೇಬಲ್ಗಳು ಭೋಜ್ಪುರಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಂಬಾ ಹಾಟ್ ಆಗಿ ಸೊಂಟ ಬಳಕಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯಕ್ಕೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಖುಷಿನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಡಾನ್ಸ್ ಮಾಡುವುದು ತಪ್ಪಲ್ಲ ಆದರೆ, ಪೊಲೀಸ್ ಠಾಣೆಯಲ್ಲಿ ಮಾಡುವುದು ತಪ್ಪು. ಹೀಗಾಗಿ ಮೂವರು ಮಹಿಳಾ ಕಾನ್ಸ್ಟೇಬಲ್ಗಳ ವಿರುದ್ಧ ಅವರು ಕೆಲಸ ಮಾಡುವ ಠಾಣೆಯಲ್ಲೇ ದೂರು ದಾಖಲಾಗಿದೆ. ಮೂವರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)