ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜಿ20 ಶೃಂಗಸಭೆಯ ಮುಕ್ತಾಯದ ನಂತರ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದರು. ಸೋಮವಾರ ಬೆಳಗ್ಗೆ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜುಗ್ನಾಥ್ ಅವರು ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ 'ಪೂಜೆ', ನಂತರ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯ ಸಾಂಪ್ರದಾಯಿಕ ಆಚರಣೆಯಲ್ಲಿ ಭಾಗವಹಿಸಿದ್ದಾರೆ. ಕುಟುಂಬ ಸಮೇತ ದಶಾಶ್ವಮೇಧ ಘಾಟ್ ತಲುಪಿದ ಅವರು, ಮೃತ ಮಾವನವರ ಆತ್ಮಕ್ಕೆ ಶಾಂತಿ ಕೋರಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಮಾರಿಷಸ್ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸಂಚಾರ ವ್ಯವಸ್ಥೆ ಬಿಗಿಗೊಳಿಸಲಾಗಿದೆ.
ಜಿ20ನಲ್ಲಿ ಮಾರಿಷಸ್ ಪ್ರಧಾನಿ
ಗುರುವಾರ ಬಹು ನಿರೀಕ್ಷಿತ ಜಿ20 ಶೃಂಗಸಭೆಗಾಗಿ ನವದೆಹಲಿಗೆ ಆಗಮಿಸಿದ ನಂತರ, ಜುಗ್ನಾಥ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿದರು. ನಂತರ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮೂಲಭೂತ ಸೌಕರ್ಯ, ಫಿನ್ಟೆಕ್, ಸಂಸ್ಕೃತಿ ಮತ್ತು ಇತರ ವಿಷಯಗಳಲ್ಲಿ ಸಹಕಾರವನ್ನು ಚರ್ಚಿಸಿದರು.
ಜುಗ್ನಾಥ್ ಅವರು ಚಂದ್ರಯಾನ-3 ಮಿಷನ್‌ನ ಯಶಸ್ಸಿನ ಬಗ್ಗೆ ಪ್ರಧಾನಿ ಮೋದಿಯನ್ನು ಅಭಿನಂದಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಮತ್ತಷ್ಟು ಸಹಕಾರವನ್ನು ಎದುರು ನೋಡುತ್ತಿದ್ದಾರೆ. ಮಾರಿಷಸ್‌ಗೆ ಅತಿಥಿ ದೇಶವಾಗಿ ಭಾಗವಹಿಸಲು ವಿಶೇಷ ಆಹ್ವಾನಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.
ಭಾರತ ಮತ್ತು ಮಾರಿಷಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 75 ನೇ ವಾರ್ಷಿಕೋತ್ಸವದ ಆಚರಣೆಯೊಂದಿಗೆ ಜಿ20 ಕಾರ್ಯಕ್ರಮಗಳೂ ಕಾಕತಾಳೀಯವಾಗಿದೆ ಎಂದು ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.