ನ್ಯೂಸ್

ಯುಟಿಪಿ ಕಾಲುವೆಗಳಿಗೆ ಭದ್ರಾ ನೀರು ಹರಿಸಿ; ರೈತರ ಆಗ್ರಹ

ರಾಣೆಬೆನ್ನೂರ: ತಾಲೂಕಿನ ಬೆಳೆಗಳಿಗೆ ನೀರು ಹಾಯಿಸುವ ಸಲುವಾಗಿ ಕೂಡಲೇ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆಗಳಿಗೆ ಭದ್ರಾ ಜಲಾಶಯದಿಂದ ನೀರು ಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಯುಟಿಪಿ ತಾಂತ್ರಿಕ ಅಧಿಕಾರಿ ಶ್ರೀಧರ ಪಿ.ಸಿ. ಮೂಲಕ ಭದ್ರಾ ಜಲಾಶಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಮುಂಗಾರು ಮಳೆ ಕ್ಷೀಣಿಸುತ್ತಿದೆ. ಆರಂಭದಲ್ಲಿ ಮಳೆ ಚನ್ನಾಗಿ ಬಂದ ಕಾರಣ ರೈತರು ಈಗಾಗಲೇ ಬಿತ್ತನೆ ಕಾರ್ಯ ಮಾಡಿದ್ದಾರೆ. ಬೀಜ ಮೊಳಕೆಯೊಡೆದಿವೆ. ಆದರೆ, ಸದ್ಯ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ಇದೇ ರೀತಿ ಮುಂದುವರಿದರೆ ಬೆಳೆಗಳು ಒಣಗಿ ಹಾಳಾಗಲಿವೆ.
ಸದ್ಯ ಬೆಳೆಗಳಿಗೆ ನೀರು ಹಾಯಿಸುವುದು ಬಹಳ ಅವಶ್ಯವಿದೆ. ಆದ್ದರಿಂದ ಭದ್ರಾ ಜಲಾಶಯದ ಅಧಿಕಾರಿಗಳು ನೀರು ಬಿಡುವ ವಾರ್ಷಿಕ ವಾಡಿಕೆಯ ದಿನಾಂಕ ಗಣನೆಗೆ ತೆಗೆದುಕೊಳ್ಳದೆ ತುರ್ತಾಗಿ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರ ನೆರವಿಗೆ ದಾವಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಬೆಳೆ ಹಾಳಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಲಿವೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ರೈತರಾದ ಹರಿಹರಗೌಡ ಪಾಟೀಲ, ನಿಂಗಪ್ಪ ಬನ್ನಿಕೋಡ, ಸುರೇಶ ಮಲ್ಲಾಪುರ, ಯಲ್ಲಪ್ಪ ಓಲೇಕಾರ, ಮೇಘರಾಜ ಕವಲೆತ್ತು, ವಿರೂಪಾಕ್ಷಗೌಡ ಪಾಟೀಲ, ತಿಪ್ಪಣ್ಣ ಜೋಗಿ, ಜಮಾಲಸಾಬ ಸೇತಸನಾದಿ, ಶಿವನಗೌಡ ಪಾಟೀಲ, ಮಲಕಪ್ಪ ಎನ್.ವೈ. ಮತ್ತಿತರರು ಉಪಸ್ಥಿತರಿದ್ದರು.