ಶಿವಮೊಗ್ಗದ ಕಸ್ತೂರಬಾ ಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದವರನ್ನು ಸನ್ಮಾನಿಸಲಾಯಿತು. ಡಾ. ಮೋಹನ್ ಚಂದ್ರಗುತ್ತಿ, ಡಾ. ಎಸ್.ಟಿ.ಅರವಿಂದ, ವೆಂಕಟೇಶ್, ಸಿ.ತಿಪ್ಪೇಸ್ವಾಮಿ, ಶ್ರೇಯಾ, ಯಶಸ್ವಿನಿ ಇದ್ದರು. 
ನ್ಯೂಸ್

ಶಿಕ್ಷಣವನ್ನು ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸಿ

ಶಿವಮೊಗ್ಗ: ನಾವು ಕಲಿತ ವಿದ್ಯೆ ಆಧುನಿಕತೆಯ ಅಹಂಕಾರಕ್ಕೆ ಸಿಕ್ಕಿಕೊಳ್ಳದೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯಿಂದ 2025-26ನೇ ಸಾಲಿನ ವಿದ್ಯಾರ್ಥಿನಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಗವಂತನನ್ನು ಪ್ರಾರ್ಥಿಸುವಾಗ ಸುಖ-ಸಂಪತ್ತುಗಳನ್ನು ಬೇಡುತ್ತೇವೆಯೇ ಹೊರತು, ಒಳ್ಳೆಯ ಮನುಷ್ಯನನ್ನಾಗಿ ಮಾಡು ಎಂದು ಕೇಳುತ್ತಿಲ್ಲ. ಯಾವಾಗ ನಾವು ಇದನ್ನು ಕೇಳುವುದಿಲ್ಲವೋ ಆಗ ನಮ್ಮತನವನ್ನು ನಾವು ಕಳೆದುಕೊಂಡಿದ್ದೇವೆ ಎಂದರ್ಥ ಎಂದರು.

ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಬೇಕು. ಉನ್ನತ ಅಂಕ ಪಡೆಯಿರಿ ಎನ್ನುವುದಕ್ಕಿಂತ, ಜೀವನವನ್ನು ಪ್ರೀತಿಯಿಂದ ಬದುಕಿ ಎಂದಾಗಬೇಕು. ಇಂದು ಮೊಬೈಲ್ ಗೀಳಿಗೆ ಬಿದ್ದು ಯುವ ಸಮೂಹ ಮೂಲೆ ಸೇರುತ್ತಿದೆ. ಕುಳಿತಲ್ಲಿಯೇ ಎಲ್ಲವೂ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ನಿಜವಾದ ಬದುಕುವ ಕಲೆಯನ್ನು ಕಲಿಯಬೇಕಿದೆ. ಸೂಕ್ಷ್ಮವಾಗಿ ಬದುಕುವ ಕ್ರಮಗಳಿಂದ ಹೊರ ಬರಬೇಕು. ಅಂಧಕಾರ, ಮೌಢ್ಯ, ವೈರುಧ್ಯಗಳನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದವರನ್ನು ಸನ್ಮಾನಿಸಲಾಯಿತು. ಎನ್‌ಇಎಸ್ ಆಜೀವ ಸದಸ್ಯ ಡಾ. ಎಸ್.ಟಿ.ಅರವಿಂದ, ನಿವೃತ್ತ ಉಪನ್ಯಾಸಕ ಜಿ.ಎಸ್.ನಟೇಶ್, ಕಸ್ತೂರಬಾ ಪಿಯು ಕಾಲೇಜಿನ ಪ್ರಾಚಾರ್ಯ ವೆಂಕಟೇಶ್, ಶಾಲೆಯ ಉಪ ಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ, ಶಾಲಾ ಸಂಸತ್‌ನ ಪ್ರಧಾನಿ ಶ್ರೇಯಾ, ವಿಪಕ್ಷ ನಾಯಕಿ ಯಶಸ್ವಿನಿ ಇತರರಿದ್ದರು.