ನ್ಯೂಸ್

ಡ್ರಗ್ಸ್ ಖರೀದಿಗೆ ಬಿಟ್ ಕಾಯಿನ್ ಬಳಕೆ: ಹ್ಯಾಕರ್ ಶ್ರೀಕಿ ಸೇರಿ 10 ಮಂದಿ ವಿರುದ್ಧ ಆರೋಪಪಟ್ಟಿ

ಬೆಂಗಳೂರು: ಬಿಟ್ ಕಾಯಿನ್ ಬಹುಕೋಟಿ ಹಗರಣ ಸಂಬಂಧ ವಿಶೇಷ ತನಿಖಾ ದಳ(ಎಸ್‌ಐಟಿ) ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸ್ನೇಹಿತರ ವಿರುದ್ಧ ಮೊದಲ ಆರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.

ಜಯನಗರದ ಶ್ರೀಕಿ, ಆತನ ಸ್ನೇಹಿತರಾದ ರಾಬಿನ್ ಖಂಡೇವಾಲಾ, ಸುಜಯ್, ಸುನೀಶ್ ಹೆಗ್ಡೆ ಹಾಗೂ ಹೇಮಂತ್ ಮುದ್ದಪ್ಪ ಸೇರಿ 10 ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಡ್ರಗ್ಸ್ ಖರೀದಿಯಲ್ಲಿ ಆರೋಪಿಗಳು ಬಿಟ್ ಕಾಯಿನ್ ಬಳಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಟ್ ಕಾಯಿನ್ ಹಗರಣ ಸಂಬಂಧ ಪ್ರತ್ಯೇಕವಾಗಿ 9 ಪ್ರಕರಣ ದಾಖಲಾಗಿವೆ. ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣವಾಗಿದೆ. ನ್ಯಾಯಾಲಯಕ್ಕೆ 500ಕ್ಕೂ ಹೆಚ್ಚಿನ ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ವೈದ್ಯಕೀಯ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲದ ವರದಿಗಳನ್ನು ಕೂಡ ಲಗತ್ತಿಸಲಾಗಿದೆ ಇನ್ನುಳಿದ ಪ್ರಕರಣಗಳ ತನಿಖೆ ಹಂತ ಹಂತವಾಗಿ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾರ್ಕ್ ವೆಬ್ ಮುಖಾಂತರ ವಿದೇಶದ ಪೆಡ್ಲರ್‌ಗಳಿಂದ ಕೆಲವರು ಡ್ರಗ್ಸ್ ಖರೀದಿಸುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತು. 2020 ನ.11ರಂದು ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ಪದೇಪದೆ ಬಂದು ಪಾರ್ಸಲ್ ಬಗ್ಗೆ ಸುಜಯ್ ಮತ್ತು ಹೇಮಂತ್ ವಿಚಾರಿಸುತ್ತಿದ್ದರು.

ಶಂಕೆಗೊಂಡ ಸಿಸಿಬಿ ಪೊಲೀಸರು, ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಡ್ರಗ್ಸ್ ಖರೀದಿ ಸಂಗತಿ ಬಯಲಾಗಿತ್ತು. ಪ್ರಕರಣದ ತನಿಖೆ ಮುಂದುವರಿಸಿದಾಗ ಡ್ರಗ್ಸ್ ದಂಧೆಯಲ್ಲಿ ಬಿಟ್ ಕಾಯಿನ್ ಬಳಕೆ ಪತ್ತೆಯಾಯಿತು. ಈ ಮಾಹಿತಿ ಆಧರಿಸಿ ಶ್ರೀಕಿ ಮತ್ತು ಆತನ ಕೆಲ ಸ್ನೇಹಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಡ್ರಗ್ಸ್ ಮಾರಾಟ ಪ್ರಕರಣವೇ ಬಿಟ್ ಕಾಯಿನ್ ಹಗರಣದ ಮೂಲವಾಗಿದೆ. ಶ್ರೀಕಿಯನ್ನು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ದೋಚಲಾಗಿದೆ ಎಂಬ ಆರೋಪ ಬಂದಿತ್ತು. ಈ ಡ್ರಗ್ಸ್ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಎಸ್‌ಐಟಿ, ಬಿಟ್ ಕಾಯಿನ್‌ಗಳ ಮೂಲ ಶೋಧಕ್ಕೆ ತನಿಖೆ ಮುಂದುವರಿಸಿದೆ.