ಶೃಂಗೇರಿ: ಅವಕಾಶವನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಉತ್ತಮ ನಾಯಕತ್ವ ಗುಣ ನಮಗೆ ರೋಟರಿ ಸಂಸ್ಥೆ ನೀಡುತ್ತದೆ.
ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಸರ್ಕಾರ ಮಾಡುವ ಕಾರ್ಯ ನಿರ್ವಹಿಸಿ ಜಗತ್ತಿಗೆ ಉನ್ನತ ಕೊಡುಗೆ ನೀಡಿದೆ ಎಂದು ಜಿಲ್ಲಾ 3182ರ ಮಾಜಿ ಗೌರ್ನರ್ ಡಿ.ಎಸ್.ರವಿ ತಿಳಿಸಿದರು.
ಬುಧವಾರ ರೈತ ಭವನದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ರೋಟರಿ ಸಂಸ್ಥೆ ಮಾಡದ ಸೇವೆಗಳು ಯಾವುದೂ ಉಳಿದಿಲ್ಲ. ರೋಟರಿಯನ್ನು ಉತ್ತಮ ಶೈಕ್ಷಣಿಕ ಸಂಸ್ಥೆಗೆ ಹೋಲಿಸಬಹುದು. ಸದಸ್ಯರಿಗೆ ನಾಯಕತ್ವ, ಶಾಂತಿ, ಸೌಹಾರ್ದವನ್ನು ಸಂಸ್ಥೆ ಕಲಿಸುತ್ತದೆ. ಸಮುದಾಯಕ್ಕೆ ಉತ್ತಮ ಸಂಸ್ಕೃತಿ ಹಾಗೂ ಸಹಕಾರಗಳನ್ನು ನೂರು ವರ್ಷಗಳಿಂದ ರೋಟರಿ ನೀಡಿದೆ. ದೇಶದಲ್ಲಿ ಯುವಶಕ್ತಿ ಹೆಚ್ಚು ಇದ್ದು ಉನ್ನತ ಮೌಲ್ಯ ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಸಂಸ್ಥೆ ಜತೆ ನಾವು ಬೆಳೆಯಬೇಕು. ಸಮುದಾಯವನ್ನೂ ಬೆಳೆಸಬೇಕು ಎಂದರು.
ಸಂಸ್ಥೆ ನೂತನ ಅಧ್ಯಕ್ಷ ಕೆ.ಸಿ.ಚರಣ್ ಮಾತನಾಡಿ, ಆತ್ಮವಿಶ್ವಾಸದಿಂದ ಸಮುದಾಯಕ್ಕೆ ಕೊಡುಗೆ ನೀಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಜಗತ್ತಿಗೆ ರೋಟರಿ ನೀಡಿದ ಕೊಡುಗೆ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ. ಜಿಲ್ಲಾ ಯೋಜನೆಯಾದ ಮೌಲ್ಯವರ್ಧಿತ ಶಿಕ್ಷಣ, ಮಣ್ಣಿನ ಫಲವತ್ತತೆ, ಈ-ತ್ಯಾಜ್ಯವಸ್ತುಗಳ ನಿರ್ವಹಣೆ, ವಾಹನ ಚಾಲನೆ ಕುರಿತು ಜಾಗೃತಿ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ರೋಟರಿ ಸಂಸ್ಥೆಗೆ ಆರು ಸದಸ್ಯರು ಸೇರ್ಪಡೆಗೊಂಡರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಲಯ-6ರ ಅಸಿಸ್ಟೆಂಟ್ ಗೌರ್ನರ್ ಶ್ರೀಹರ್ಷ, ವಲಯ-6ರ ಸೇನಾನಿ ಶಶಿಶೇಖರ್, ಮಾಜಿ ಅಧ್ಯಕ್ಷೆ ಅನಸೂಯಾ, ಮಾಜಿ ಕಾರ್ಯದರ್ಶಿ ಡಾ. ಕೆ.ಸಿ.ನಾಗೇಶ್, ನೂತನ ಕಾರ್ಯದರ್ಶಿ ಎನ್.ಗೌತಮ್ ಇದ್ದರು.