ನ್ಯೂಸ್

ಸೈಬರ್ ಗಾಳಕ್ಕೆ ವಿದ್ಯಾರ್ಥಿಗಳ ಬಳಕೆ!; ಆಧಾರ್ , ಪ್ಯಾನ್ ಪಡೆದು ಬ್ಯಾಂಕ್ ಖಾತೆ ಸೃಷ್ಟಿಸಿ ಜನರ ಹಣಕ್ಕೆ ಕನ್ನ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕೂಲಿ ಕಾರ್ವಿುಕರು, ಹಳ್ಳಿ ಜನರಿಗೆ ಹಣದಾಸೆ ತೋರಿಸಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಅಕ್ರಮ ವಹಿವಾಟಿಗೆ ಬಳಸುತ್ತಿದ್ದ ಸೈಬರ್ ಕಳ್ಳರ ಕಣ್ಣೀಗ ವಿದ್ಯಾರ್ಥಿಗಳತ್ತ ತಿರುಗಿದೆ. ಓದುವ ಮಕ್ಕಳು ಅಥವಾ ಪಾರ್ಟ್​ಟೈಮ್ ಕೆಲಸ ಹುಡುಕುವವರನ್ನು ಬಲೆಗೆ ಬೀಳಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಲಕ್ಷಾಂತರ ರೂ. ವಹಿವಾಟು ನಡೆಸಿ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣದಿಂದ ಈ ಜಾಲ ಬೆಳಕಿಗೆ ಬಂದಿದೆ.

ಕೆಲವು ವಿದ್ಯಾರ್ಥಿಗಳು ಅರೆಕಾಲಿಕ ನೌಕರಿಗಾಗಿ ಗೂಗಲ್ ಸರ್ಚ್ ಮಾಡುತ್ತಾರೆ. ಇಂತಹವರು ಸೈಬರ್ ಕಳ್ಳರ ಬಲೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಫೇಸ್​ಬುಕ್, ಟ್ವಿಟರ್, ಇನ್​ಸ್ಟಾ ಗ್ರಾಮ್ ಟೆಲಿಗ್ರಾಂ ಇನ್ನಿತರ ಜಾಲತಾಣ ವೇದಿಕೆಯಲ್ಲಿ ಸೈಬರ್ ಕಳ್ಳರು ನೀಡುವ ಜಾಹಿರಾತು ನಂಬಿ ಬಲೆಗೆ ಬೀಳುತ್ತಾರೆ. ಕೆಲಸ ಮಾಡುವುದಕ್ಕೆ ಒಪ್ಪಿದ ಬಳಿಕ ಅಂತಹ ವಿದ್ಯಾರ್ಥಿಗಳೊಂದಿಗೆ ಟೆಲಿಗ್ರಾಂನಲ್ಲಿ ವ್ಯವಹಾರ ಶುರು ಮಾಡುತ್ತಾರೆ.

ಮೊದಲು ಗೂಗಲ್​ನಲ್ಲಿ ವಿಡಿಯೋ ಮತ್ತು ಫೋಟೋಗಳಿಗೆ ಲೈಕ್, ಶೇರಿಂಗ್ ಮಾಡಿ ಒಪ್ಪಿಗೆಯ ಅಭಿಪ್ರಾಯ ಬರೆದರೆ ಪ್ರತಿಯೊಂದಕ್ಕೆ 150 ರಿಂದ 200 ರೂ. ಕೊಡುವುದಾಗಿ ಹೇಳುತ್ತಾರೆ. ಆ ಕಮಿಷನ್ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ತೆರೆಯಬೇಕೆಂದು ಹೇಳಿ ವಿದ್ಯಾರ್ಥಿಯ ಆಧಾರ್, ಪ್ಯಾನ್ ಕಾರ್ಡ್ ಮತ್ತು ಸ್ವ-ವಿವರ ಪಡೆದು ಬ್ಯಾಂಕ್ ಖಾತೆ ತೆರೆಯುತ್ತಾರೆ.

ಇಂತಹ ಬ್ಯಾಂಕ್ ಖಾತೆ ವಿವರ ದುಬೈನಲ್ಲಿ ಇರುವ ಸೈಬರ್ ಕಿಂಗ್​ಪಿನ್​ಗಳಿಗೆ ರವಾನೆ ಆಗುತ್ತದೆ. ಮತ್ತೊಂದೆಡೆ ಪಾರ್ಟ್ ಟೈಮ್ ನೌಕರಿ ಮಾಡುತ್ತಿರುವ ವಿದ್ಯಾರ್ಥಿ ಬ್ಯಾಂಕ್ ಖಾತೆಗೆ ಪ್ರತಿದಿನ 150 ರೂ.ಅಥವಾ 200 ರೂ.ರಂತೆ 2 ಸಾವಿರ ರೂ. ವರೆಗೂ ಜಮೆ ಮಾಡಿ ನಂಬಿಕೆ ಗಿಟ್ಟಿಸಿಕೊಳ್ಳುತ್ತಾರೆ. ಕೊನೆಗೊಂದು ದಿನ ಇದಕ್ಕಿಂತ ಹೆಚ್ಚಾಗಿ ಇರುವ ಜಾಬ್ ನಿಮಗೆ ಆಫರ್ ಬಂದಿದೆ. ಇದರಲ್ಲಿ ನಿಮಗೆ ಹೆಚ್ಚಿನ ಕಮಿಷನ್ ಅಥವಾ ಹಣ ದೊರೆಯಲಿದೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಖೆಡ್ಡಾಗೆ ಉರುಳಿಸುತ್ತಾರೆ. ಇದಕ್ಕೆ ಒಪ್ಪಿದ ವಿದ್ಯಾರ್ಥಿಯ ಬ್ಯಾಂಕ್ ಖಾತೆಗಳನ್ನು ಸೈಬರ್ ಕಳ್ಳರು, ವಂಚನೆ ಮಾಡಲು ಬಳಸಿಕೊಳ್ಳುತ್ತಾರೆ. ಖಾತೆಗಳಿಗೆ ಲಕ್ಷಾಂತರ ರೂ. ಜಮೆ ಮಾಡಿಸುತ್ತಾರೆ. ಬಳಿಕ ವಿದ್ಯಾರ್ಥಿಗೆ ಕರೆ ಮಾಡಿ 1 ಲಕ್ಷ ರೂ.ಗೆ 10 ರಿಂದ 15 ಸಾವಿರ ರೂ. ಕಮಿಷನ್ ಇಟ್ಟುಕೊಂಡು ಉಳಿದ ಹಣ ಬೇರೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಈ ಷಡ್ಯಂತ್ರ ಅರಿಯದ ವಿದ್ಯಾರ್ಥಿಗಳು ಕಂಪನಿ ಹಣವೆಂದು ವರ್ಗಾವಣೆ ಮಾಡಿ ಕಮಿಷನ್ ಪಡೆಯುತ್ತಾರೆ. ಕೊನೆಗೊಂದು ದಿನ ಪೊಲೀಸರು ಬ್ಯಾಂಕ್ ಖಾತೆ ಜಪ್ತಿ ಮಾಡಿದ ಮೇಲಷ್ಟೇ ಸೈಬರ್ ಕಳ್ಳರ ಬಲೆಯಲ್ಲಿ ಸಿಲುಕಿರುವುದು ವಿದ್ಯಾರ್ಥಿಗಳಿಗೆ ಗೊತ್ತಾಗುತ್ತದೆ.

ಹೂಡಿಕೆ ದಂಧೆಗೆ ಬಳಕೆ: ಇಂತಹ ಬ್ಯಾಂಕ್ ಖಾತೆಗಳನ್ನು ಹೆಚ್ಚಾಗಿ ಹೂಡಿಕೆ ನೆಪದಲ್ಲಿ ವಂಚನೆ ಮಾಡುವ ದಂಧೆಗೆ ಬಳಸುತ್ತಾರೆ. ಬ್ಯಾಂಕ್ ಖಾತೆದಾರರಿಗೆ ಕಮಿಷನ್ ಆಸೆ ತೋರಿಸಿ ತಮ್ಮ ಬ್ಯಾಂಕ್ ಖಾತೆಗೆ ಬರುವ ಹಣವನ್ನು ಬೇಕಾದ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಆನ್​ಲೈನ್​ನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಳ್ಳುವ ಹಣವನ್ನು ಇಂತಹ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಪೊಲೀಸರ ದೂರಿನ ಮೇರೆಗೆ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡುವವರೆಗೂ ಖಾತೆ ಚಾಲ್ತಿಯಲ್ಲಿ ಇರುತ್ತದೆ. ಐದಾರು ತಿಂಗಳ ಅವಧಿಯಲ್ಲಿ 15 ರಿಂದ 20 ಲಕ್ಷ ರೂ. ವಹಿವಾಟು ನಡೆಯುತ್ತಿವೆ..

ಆತ್ಮಹತ್ಯೆಯಿಂದ ಬೆಳಕಿಗೆ: ಬೆಂಗಳೂರಿನ ಚಿಕ್ಕಕಲ್ಲಸಂದ್ರದಲ್ಲಿ ಇತ್ತೀಚೆಗಷ್ಟೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಪಾಲಕರು ಆತನ ಕೊಠಡಿ ಪರಿಶೀಲಿಸಿದಾಗ ಕೆಲವು ಬ್ಯಾಂಕ್ ದಾಖಲೆ ಪತ್ರ ಲಭಿಸಿತ್ತು. ತಮ್ಮ ಮಗ ತಾವು ಮಾಡಿಕೊಟ್ಟ ಬ್ಯಾಂಕ್ ಖಾತೆ ಜತೆಗೆ ಬೇರೊಂದು ಖಾತೆ ಮತ್ತು ಮೊಬೈಲ್ ಬಳಸುತ್ತಿದ್ದ ವಿಚಾರ ತಿಳಿದು ಬಂತು. ಖಾಸಗಿ ಬ್ಯಾಂಕ್ ಖಾತೆಯಲ್ಲಿ 6 ತಿಂಗಳಲ್ಲಿ 21 ಲಕ್ಷ ರೂ. ವಹಿವಾಟು ನಡೆದಿತ್ತು. ವಿದ್ಯಾರ್ಥಿ ಬ್ಯಾಂಕ್ ಖಾತೆಗೆ ಬಂದಿದ್ದ ಹಣ ಬೇರೊಂದು ಖಾತೆಗೆ ವರ್ಗಾವಣೆ ಮಾಡಿದ್ದ. ಈ ಬಗ್ಗೆ ಪಾಲಕರು ಕೊಟ್ಟ ದೂರಿನ ಮೇರೆಗೆ ಸುಬ್ರಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಸೈಬರ್ ಕಳ್ಳರು ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ.

ವಿದ್ಯಾರ್ಥಿಗಳೇ ಎಚ್ಚರ

* ಆನ್​ಲೈನ್ ಜಾಬ್​ಗಳನ್ನು ನಂಬದಿರಿ

* ಆಧಾರ್, ಪ್ಯಾನ್ ವಿವರ ಕೊಡಬೇಡಿ

* ಮೈಮರೆತು ಕೊಟ್ಟರೆ ಸಂಕಷ್ಟ ಖಚಿತ

* ಕಾನೂನು ಸುಳಿಯಲ್ಲಿ ಸಿಲುಕುತ್ತೀರಿ

* ತಮ್ಮದಲ್ಲದ ಹಣ ಖಾತೆಗೆ ಬರಬಾರದು

* ಹೀಗೆ ಬಂದಲ್ಲಿ ಅದು ಅಕ್ರಮ ವಹಿವಾಟು

* ಈ ತಪ್ಪಿನಿಂದ ನೀವು ಜೈಲು ಸೇರಬಹುದು