ನ್ಯೂಸ್

ಮೋಜಿಗಾಗಿ ‘ಸರಸ್ವತಿ ಮಂದಿರ’ ಬಳಕೆ

ಹುಣಸೂರು: ತಾಲೂಕಿನ ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯ ಆವರಣ ಜೂಜುಕೋರರ ಅಡ್ಡೆಯಾಗಿದ್ದು, ಗ್ರಾಮಸ್ಥರು ಮತ್ತು ಸಂಬಂಧಪಟ್ಟ ಇಲಾಖೆಗಳ ದಿವ್ಯ ನಿರ್ಲಕ್ಷ್ಯ ಇಡೀ ಶೈಕ್ಷಣಿಕ ವಾತಾವರಣವನ್ನೇ ಹಾಳುಗೆಡವಿದೆ.

ತಟ್ಟೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನಿಲುವಾಗಿಲು ಗ್ರಾಮ ಪಟ್ಟಣದಿಂದ 4 ಕಿ.ಮೀ. ಅಂತರದಲ್ಲಿದೆ. ಹನಗೋಡು ಮುಖ್ಯರಸ್ತೆಯ ಬದಿಯಲ್ಲಿಯೇ ಶಾಲೆ ಇದ್ದು, ಅದರ ಆವರಣದಲ್ಲಿ ಕುಡಿತ, ಜೂಜು ಅಡ್ಡೆ ಎಗ್ಗಿಲ್ಲದೆ ನಡೆದಿದೆ.

ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಈ ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ಧಾರೆ. 55 ವಿದ್ಯಾರ್ಥಿಗಳಿದ್ದು, ಮೂವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ: ಕರೊನಾ ಲಾಕ್‌ಡೌನ್‌ನಿಂದಾಗಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡಿಲ್ಲ. ಆದರೆ, ಇಲ್ಲಿನ ಪರಿಸ್ಥಿತಿ ಶಾಲೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂಬಂತಾಗಿದೆ. ಪ್ರತಿದಿನ ಸಂಜೆಯಾಯಿತೆಂದರೆ ಸಾಕು, ಊರಿನ ಪಡ್ಡೆ ಹುಡುಗರು ಕಾಂಪೌಂಡ್ ಹಾರಿ ಶಾಲೆಯ ಆವರಣದೊಳಗೆ ಬಂದು ಜೂಜು, ಕುಡಿತ, ಮೋಜು, ಮಸ್ತಿ ಮಾಡುತ್ತಾರೆ. ಶಾಲೆಯ ಆವರಣದೊಳಗೆ ಎಲ್ಲೆಂದರಲ್ಲಿ ಬಾಟಲ್‌ಗಳು, ಗುಟ್ಕಾ ಮತ್ತು ಮದ್ಯದ ಪ್ಯಾಕೆಟ್‌ಗಳ ರಾಶಿಯೇ ಬಿದ್ದಿದೆ. ಶಿಕ್ಷಕರು ಈ ತ್ಯಾಜ್ಯವನ್ನು ಪ್ರತಿದಿನ ತೆಗೆದು ಶುಚಿಗೊಳಿಸಬೇಕಾದ ಅನಿವಾರ್ಯತೆ ಇದೆ.

ಶಿಥಿಲ ಕೊಠಡಿ: ಶಾಲೆಯ ಆವರಣದಲ್ಲಿ ಈಗಲೋ ಆಗಲೋ ಬೀಳುವ ಹಂತದಲ್ಲಿ ಕೊಠಡಿಯೊಂದು ಇದೆ. 10-20 ವರ್ಷಗಳ ಹಿಂದೆ ಈ ಕೊಠಡಿಯಲ್ಲಿ ಗ್ರಾಮಲೆಕ್ಕಿಗರು ಕರ್ತವ್ಯ ನಿರ್ವಹಿಸುತ್ತಿದ್ದರೆಂದು ಗ್ರಾಮಸ್ಥರು ಹೇಳುತ್ತಾರೆ. ಇದೀಗ ಈ ಕೊಠಡಿ ಜೂಜುಕೋರರ ಹೆಡ್‌ಆಫೀಸ್ ಆಗಿದೆ. ಈ ಕೊಠಡಿಯೊಳಗೆ ಚಾಪೆ ಹಾಸಿಕೊಂಡು ಮದ್ಯಪಾನ, ಧೂಮಪಾನ, ಗಲಾಟೆ, ಜಗಳ ಮಾಡುತ್ತಾ ರಾತ್ರಿಯಿಡೀ ಕಾಲ ಕಳೆಯುತ್ತಾರೆ. ಶೌಚಗೃಹದ ಬಳಿಯೇ ಇರುವ ಕೊಠಡಿ ಅತ್ಯಂತ ದುಸ್ಥಿತಿಯಲ್ಲಿದ್ದು, ಬೆಳಗಿನ ಹೊತ್ತು ಕುಸಿದು ಬಿದ್ದರೆ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಆದ್ದರಿಂದ ಮಕ್ಕಳು ಅತ್ತ ಹೋಗದಂತೆ ಶಿಕ್ಷಕರು ಗಮನ ಹರಿಸುತ್ತಿದ್ದಾರೆ.

ನಿಂತ ನೀರು, ಸೊಳ್ಳೆಗಳ ಕಾಟ: ಶಾಲೆಯ ಕಾಂಪೌಂಡ್ ಬಳಿಯೇ ದೊಡ್ಡ ಚರಂಡಿಯಿದ್ದು, ಅದರ ಅಂತ್ಯ ಭಾಗದಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟಿರುವುದರಿಂದ ನೀರು ಸರಾಗವಾಗಿ ಹರಿದು ಹೋಗದೆ, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಚರಂಡಿಯಲ್ಲಿ ಖಾಲಿ ನೀರಿನ ಬಾಟಲ್, ಮದ್ಯದ ಬಾಟಲ್‌ಗಳು ಸದಾ ಬಿದ್ದಿರುತ್ತವೆ.

ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ದುಸ್ಥಿತಿಯಲ್ಲಿರುವ ಕೊಠಡಿಯ ಕುರಿತು ಮಾಹಿತಿ ಪಡೆದಿದ್ದು, ಆದಷ್ಟು ಶೀಘ್ರ ಕೊಠಡಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಶಾಲೆಯ ಆವರಣದಲ್ಲಿ ಜೂಜಾಡುವುದನ್ನು ನಿಯಂತ್ರಿಸಲು ಪೊಲೀಸರ ಸಹಾಯ ಪಡಯಲಾಗುವುದು.
ಎಸ್.ಪಿ.ನಾಗರಾಜ್, ಕ್ಷೇತ್ರಶಿಕ್ಷಣಾಧಿಕಾರಿ, ಹುಣಸೂರು

ಶಾಲಾ ಆವರಣದಲ್ಲಿ ಶೈಕ್ಷಣಿಕ ವಾತಾವರಣವನ್ನು ಹಾಳುಗೆಡಹುವ ಚಟುವಟಿಕೆ ನಡೆಯುತ್ತಿರುವುದರ ಕುರಿತು ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ಬಡ ಮಕ್ಕಳೇ ಹೆಚ್ಚಾಗಿ ಇಲ್ಲಿಗೆ ಬರುತ್ತಿದ್ದು, ಅವರ ಭವಿಷ್ಯದ ಕುರಿತು ಅನಾದರ ಸಲ್ಲದು. ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು.
ನಿಲುವಾಗಿಲು ಪ್ರಭಾಕರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಕ್ಷಣಾ ವೇದಿಕೆ, ಹುಣಸೂರು