ಭದ್ರಾವತಿಯಲ್ಲಿ ಜೆಡಿಎಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸಿದರು. ಸುರೇಶ್ ಗೌಡ, ಶಾರದಾ ಅಪ್ಪಾಜಿ, ಅಜಿತ್ ಅಪ್ಪಾಜಿ, ಬೋಜೇಗೌಡ, ಶಾರದಾ ಪೂರ‌್ಯಾನಾಯ್ಕ ಇತರರಿದ್ದರು.  
ನ್ಯೂಸ್

ಭದ್ರಾವತಿಯಲ್ಲಿ ಅಕ್ರಮ ದಂಧೆಗಳಿಗೆ ಅಧಿಕಾರ ಬಳಕೆ

ಭದ್ರಾವತಿ: ಜೆಡಿಎಸ್ ಕಾರ್ಯಕರ್ತರ ಗಡಿಪಾರು, ವಿನಾಕಾರಣ ಕೇಸು ದಾಖಲಿಸಿ ದೌರ್ಜನ್ಯ ನಡೆಸುತ್ತಿರುವ ಆಡಳಿತ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಜನರೊಂದಿಗೆ ಜನತಾದಳ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಅಧಿಕಾರವೂ ಶಾಶ್ವತವಲ್ಲ. ನಿಮ್ಮನ್ನು ನೀವು ಪ್ರಭಾವಶಾಲಿಗಳೆಂದು ಭಾವಿಸಬೇಡಿ. ಅಧಿಕಾರವನ್ನು ಇಸ್ಪೀಟ್, ಮಟ್ಕಾ ದಂಧೆಗಳಿಗೆ ಬಳಸಿಕೊಂಡು ಯುವ ಸಮೂಹವನ್ನು ಹಾಳುಮಾಡುತ್ತಿರುವ ನೀವು ಮುಂದಿನ ಚುನಾವಣೆಯಲ್ಲಿ ಗೆದ್ದು ಬಂದರೆ ನಾನು ನನ್ನ ಜೀವಮಾನದಲ್ಲೇ ಭದ್ರಾವತಿಗೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದರು.

ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಕಾರ್ಖಾನೆಗೆ ಹಲವು ಬಾರಿ ಭೇಟಿ ಕೊಟ್ಟು ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಡಿಪಿಆರ್ ಕೂಡ ಸಿದ್ಧವಾಗಿದೆ. 1500 ಕೋಟಿ ರೂ. ಬಂಡವಾಳವಷ್ಟೇ ಅಲ್ಲ, ಅದಕ್ಕೂ ಹೆಚ್ಚಿನ ಬಂಡವಾಳವನ್ನು ಕಾರ್ಖಾನೆಗೆ ತೊಡಗಿಸಲಿದ್ದಾರೆ. ಕಾಯಂ ನೌಕರರು, ಗುತ್ತಿಗೆ ಕಾರ್ಮಿಕರು ಹಾಗೂ ನಿವೃತ್ತ ನೌಕರರ ಅನುಕೂಲಕ್ಕಾಗಿ ನಿರಂತರ ಪ್ರಯತ್ನ ನಡೆಯುತ್ತಿದೆ. ಯಾರೂ ಧೃತಿಗೆಡುವ ಅಗತ್ಯವಿಲ್ಲ ಎಂದರು.

ತಾಲೂಕನ್ನು ರಾಮರಾಜ್ಯವನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಮತದಾರರು ಜೆಡಿಎಸ್ ಪಕ್ಷ ಸೇರುವುದರ ಜತೆಗೆ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ನಿಂತು ಶಾರದಾ ಅಪ್ಪಾಜಿ ಅವರ ಕೈಬಲಪಡಿಸಬೇಕು. ನಿಮ್ಮೆಲ್ಲರಿಗೂ ಬೆಂಬಲವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನಿಲ್ಲುತ್ತದೆ. ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇವೆ. ಯಾವುದೇ ಭಯ, ಆತಂಕ ಬೇಡ ಎಂದು ಅಭಯ ನೀಡಿದರು.

ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಮಾತನಾಡಿ, ಕ್ಷೇತ್ರದ ಮತದಾರರು ದೇವೇಗೌಡ ಅವರ ಕುಟುಂಬದ ಮೇಲೆ ನಂಬಿಕೆ ಇಡಿ. ನಿಖಿಲ್ ಕುಮಾರಸ್ವಾಮಿ ಅವರು ಉತ್ತಮ ಕೆಲಸ ಮಾಡಲಿದ್ದಾರೆ. ಅದಕ್ಕಾಗಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ವಿಐಎಸ್‌ಎಲ್ ಕಾರ್ಖಾನೆಯೊಂದಿಗೆ ಇಲ್ಲಿನ ಎಂಪಿಎಂ ಕಾರ್ಖಾನೆಯನ್ನೂ ಅಭಿವೃದ್ದಿಪಡಿಸುವ ಯೋಚನೆ ಕುಮಾರಸ್ವಾಮಿ ಅವರ ಮನದಲ್ಲಿದೆ. ಗುತ್ತಿಗೆ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ಕೆಲಸ. ನಿವೃತ್ತ ಕಾರ್ಮಿಕರ ಲೀಸ್ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಮಂಡ್ಯ ಮಾಜಿ ಶಾಸಕ ಸುರೇಶ್ ಗೌಡ, ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ರಾಮೇಗೌಡ, ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ಅಜಿತ್ ಅಪ್ಪಾಜಿ, ಮಧುಕುಮಾರ್, ಕರುಣಾಮೂರ್ತಿ, ಚಂದ್ರೇಗೌಡ ಇತರರಿದ್ದರು.