ನ್ಯೂಸ್

ಕೃಷಿ ವಿದ್ಯುತ್ ಬಳಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ: ಸಚಿವ ಜಾರ್ಜ್

ಬೆಂಗಳೂರು: ಕೃಷಿ ಬೆಳೆಗಳಿಗೆ ಅಗತ್ಯತೆ, ಪ್ರದೇಶವಾರು ವಿದ್ಯುತ್ ಪೂರೈಕೆ ನಿರ್ವಹಣೆಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆಗೆ ಇಂಧನ ಇಲಾಖೆ ಉತ್ಸುಕವಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಭತ್ತ ಮತ್ತಿತರ ಬೆಳೆಗಳ ಹಂಗಾಮು, ಬೇಡಿಕೆ, ಗರಿಷ್ಠ ಬಳಕೆ ಅವಧಿ ವಿಭಿನ್ನವಾಗಿರುತ್ತದೆ. ಉಪಗ್ರಹದ ಚಿತ್ರ ಬಳಸಿಕೊಂಡು ಪ್ರದೇಶವಾರು ಬೆಳೆ, ವಿದ್ಯುತ್ ಬೇಡಿಕೆ ಅಂದಾಜಿಸಿ, ಆಯಾ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಒದಗಿಸುವುದು ಎಐ ತಂತ್ರಜ್ಞಾನ ಬಳಕೆ ಉದ್ದೇಶ.

ಇದರಿಂದಾಗಿ ಬೆಳೆಗಳಿಗೆ ಅಗತ್ಯವಿರುವ ಕಾಲದಲ್ಲಿ ವಿದ್ಯುತ್ ಲಭ್ಯತೆ, ದಕ್ಷತೆ, ವಿದ್ಯುತ್ ಉಪಕೇಂದ್ರ ಮತ್ತು ಪರಿವರ್ತಕಗಳ ಕಾರ್ಯಕ್ಷಮತೆ ಹೀಗೆ ಬಹೂಪಯೋಗಗಳಿವೆ.

ವಿದ್ಯುತ್ ಬೇಡಿಕೆ ಅಂದಾಜಿಸಿ ಪೂರೈಕೆ ವ್ಯವಸ್ಥೆಯನ್ನು ಎಐ ತಂತ್ರಜ್ಞಾನದಡಿ ನಿರ್ವಹಣೆ ಸಾಧಕ-ಬಾಧಕ ಪರೀಕ್ಷಿಸಲು ಪೈಲಟ್ ಪ್ರೊಜೆಕ್ಟ್ ಜಾರಿಗೊಳಿಸಲಾಗಿದೆ. ಸಲತೆ ಆಧರಿಸಿ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ರೈತರ ಹಿತರಕ್ಷಣೆ

ರೈತರ ಹಿತರಕ್ಷಣೆಆಗಿ ನೀರಾವರಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ. 10 ಎಚ್‌ಪಿವರೆಗೆ ಐಪಿ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಅಬಾಧಿತ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡವೆಂದು ಕೆ.ಜೆ.ಜಾರ್ಜ್ ಸಮಜಾಯಷಿ ನೀಡಿದರು.

ರೈತರ ಸಹಕಾರದಿಂದ ಈವರೆಗೆ 32 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದು, ಇನ್ನೂ ಎರಡು ಲಕ್ಷ ಪಂಪ್‌ಸೆಟ್‌ಗಳು ಉಳಿದಿವೆ. ಸಿಎಂ ನಿರ್ದೇಶನದಂತೆ ಮುಂದಿನ ಹೆಜ್ಜೆಯಿಡುತ್ತೇವೆ ಎಂದರು.

ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆಯಾಗುತ್ತದೆ. ನಿಜವಾಗಲೂ ಬಳಕೆ ಪ್ರಮಾಣವೆಷ್ಟು, ಅನಗತ್ಯ ಸೋರಿಕೆಯಾಗುತ್ತಿದೆಯೆ ? ಎಂದು ತಿಳಿಯಲು, ತಾಂತ್ರಿಕ ಅಡಚಣೆ ನಿವಾರಿಸುವುದು ಆಧಾರ್ ಜೋಡಣೆಯ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಎನ್‌ಟಿಪಿಸಿ ಆಕ್ಷೇಪ

ಛತ್ತಿಸಗಡದ ಗೋದ್ನಾ ಬಳಿ ತಲಾ 800 ಮೆಗಾ ವಾಟ್ ವಿದ್ಯುತ್ ಸಾಮರ್ಥ್ಯದ ಎರಡು ಘಟಕಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ತೆಹ್ರಿ ಜತೆಗೆ ಒಪ್ಪಂದವೇರ್ಪಟ್ಟಿತ್ತು.

ಆದರೆ ಕೇಂದ್ರದ ಮತ್ತೊಂದು ಅಂಗಸಂಸ್ಥೆ ಎನ್‌ಟಿಪಿಸಿ ಆಕ್ಷೇಪವೆತ್ತಿದೆ. ಜಲ ಮೂಲದ ವಿದ್ಯುತ್ ಯೋಜನೆ ಜವಾಬ್ದಾರಿ ತೆಹ್ರಿ, ಅದ್ಹೇಗೆ ಥರ್ಮಲ್ ಯೋಜನೆಗೆ ಕೈಹಾಕಿದೆ ? ಎಂದು ಕೇಳಿದೆ.

ರಾಜ್ಯ ಸರ್ಕಾರದ ಜತೆ ಒಪ್ಪಂದದಂತೆ ತೆಹ್ರಿಗೆ ಮುಂದುವರಿಯಲು ಕೇಂದ್ರ ಸರ್ಕಾರ ಅವಕಾಶ ನೀಡದಿದ್ದರೆ, ಕೆಪಿಸಿಎಲ್‌ನಿಂದಲೇ ಎರಡೂ ಘಟಕಗಳನ್ನು ನಿರ್ಮಿಸಲಿದ್ದೇವೆ.

ಯೋಜನೆಗೆ ಬೇಕಾದ ಜಮೀನು ಸ್ವಾಧೀನವಾಗಿದೆ. ಎರಡು ಕಲ್ಲಿದ್ದಲು ಬ್ಲಾಕ್‌ಗಳು ಹಂಚಿಕೆಯಾದ ಕಾರಣ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಕೆ.ಜೆ.ಜಾರ್ಜ್ ತಿಳಿಸಿದರು.

ಮುಂಗಡ ವಿದ್ಯುತ್ ವಿನಿಮಯ

ಕಳೆದ ಬರಗಾಲದಲ್ಲಿ ವಿನಿಮಯ ಒಪ್ಪಂದದಂತೆ ದಿನದ 24 ತಾಸು ಪೂರೈಕೆಯಂತೆ 15 ದಶಲಕ್ಷ ಯೂನಿಟ್, ಉತ್ತರಪ್ರದೇಶದಿಂದ ಪ್ರತಿದಿನ 500 ರಿಂದ 1000 ಮೆಗಾ ವಾಟ್ ವಿದ್ಯುತ್‌ನ್ನು ರಾಜ್ಯ ಸರ್ಕಾರ ಪಡೆದಿತ್ತು.

ಭರಪೂರ ಮಳೆಯಿಂದಾಗಿ ವಿನಿಮಯದ ವಿದ್ಯುತ್‌ನ್ನು ಎರಡೂ ರಾಜ್ಯಗಳಿಗೆ ಚುಕ್ತಾ ಮಾಡಿದ್ದಲ್ಲದೆ, ಮುಂಗಡ ವಿನಿಮಯದ ಒಡಂಬಡಿಕೆ ಪ್ರಕಾರ ಪಂಜಾಬ್‌ಗೆ ಐದು ದಶಲಕ್ಷ ಯೂನಿಟ್ ವಿದ್ಯುತ್ ಹೆಚ್ಚುವರಿಯಾಗಿ ನೀಡಿದ್ದೇವೆ ಎಂದು ಕೆ.ಜೆ.ಜಾರ್ಜ್ ಹೇಳಿದರು.