ನ್ಯೂಸ್

ಶ್ವಾಸಕೋಶದ ಕ್ಯಾನ್ಸರ್ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ !

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್ ಪತ್ತೆಗೆ ಪರೀಕ್ಷೆ ವೇಗ ಹೆಚ್ಚಿಸುವ ಉದ್ದೇಶದಿಂದ ಅಸ್ಟ್ರಾಜೆನೆಕಾ ಇಂಡಿಯಾ ಹಾಗೂ ರಾಜ್ಯ ಸರ್ಕಾರ ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಮಕ್ಷಮ ಇಲಾಖೆ ಆಯುಕ್ತ ರಂದೀಪ್ ಹಾಗೂ ಅಸ್ಟ್ರಾಜೆನಿಕಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಭಾರತದ ಅಧ್ಯಕ್ಷ ಡಾ.ಸಂಜೀವ್ ಪಾಂಚಾಲಾ ಪರಸ್ಪರ ತಿಳಿವಳಿಕೆಗೆ ಸಹಿ ಹಾಕಿ, ಒಪ್ಪಂದ ಪತ್ರವನ್ನು ವಿನಿಮಯ ಮಾಡಿಕೊಂಡರು.

ಈ ಒಡಂಬಡಿಕೆ ಪ್ರಕಾರ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ (ಸ್ಕ್ರೀನಿಂಗ್) ತಂತ್ರಜ್ಞಾನ ಅಳವಡಿಸಲಿದ್ದು, ಆರಂಭಿಕ ಹಂತದಲ್ಲೇ ಶ್ವಾಸಕೋಶ ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಲಿದೆ.

ಒಂದೇ ಬಾರಿ 29 ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಯನ್ನು ಪರೀಕ್ಷಿಸುವ ಈ ತಂತ್ರಜ್ಞಾನವನ್ನು ‘ಕ್ಯೂರ್.ಎಐ’ ಅಭಿವೃದ್ಧಿಪಡಿಸಿದೆ.

ಯಶಸ್ಸು ಆಧರಿಸಿ ವಿಸ್ತರಣೆ

ರಾಜ್ಯದ 19 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಐ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲು ಅಸ್ಟ್ರಾಜೆನಿಕಾ ಸಂಸ್ಥೆ ಮುಂದೆ ಬಂದಿದೆ. ಮುಖ್ಯವಾಗಿ ಶ್ವಾಸಕೋಶ ಕ್ಯಾನ್ಸರ್‌ನ್ನು ಆರಂಭಿಕವಾಗಿ ಪತ್ತೆ ಹಚ್ಚಲಿದ್ದು, ಒಂದು ವರ್ಷದವರೆಗೆ ಉಚಿತ ತಪಾಸಣೆ ಸೇವೆ ಒದಗಿಸಲು ಸಂಸ್ಥೆ ಒಪ್ಪಿಕೊಂಡಿದೆ.

ಒಂದು ವರ್ಷದ ಪ್ರಾಯೋಗಿಕ ಉಪಕ್ರಮವನ್ನು ಪರಿಶೀಲಿಸಲಾಗುವುದು. ಸಂಸ್ಥೆ ಒದಗಿಸಿದ ಸೇವೆ ಯಶಸ್ವಿಯಾದರೆ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಿದ್ದು, ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಶುಕ್ರವಾರದಿಂದ ತಂತ್ರಜ್ಞಾನ ಅಳವಡಿಕೆಯಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದೆ. ವಿಶೇಷವಾಗಿ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೈಕೆ ಪಡೆಯಲು ಸಾಧ್ಯವಾಗದವರಿಗೆ ಇದು ಅತ್ಯಂತ ಪ್ರಯೋಜನಕಾರಿ ಮಾರ್ಗವಾಗಿ ಹೊರಹೊಮ್ಮುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ವಾರ್ಷಿಕ ಶೇ.1ರಷ್ಟು ಕ್ಯಾನ್ಸರ್ ಹೆಚ್ಚಳ

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ನಡೆಸಿರುವ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಮಾಣವು ಶೇಕಡ ಒಂದರಷ್ಟು ಹೆಚ್ಚುತ್ತಿದೆ.

ರಾಜ್ಯದಲ್ಲಿ 2025ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲಿವೆ ಎಂಬ ವರದಿ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ರೋಗಿಗಳಿಗೆ ನೆರವಾಗಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಕರೊನಾ ಸಾಂಕ್ರಾಮಿಕ ರೋಗದ ಹಾವಳಿ ಸಂದರ್ಭದಲ್ಲಿ ಅಸ್ಟ್ರಾಜೆನಿಕಾ ಸಂಸ್ಥೆಯವರ ಸೇವೆ, ಲಸಿಕೆ ತಯಾರಿಸಿ ಕೊಡುವಲ್ಲಿ ಶ್ರಮ ಗಮನಾರ್ಹವಾಗಿದೆ. ಇದೀಗ ರಾಜ್ಯದಲ್ಲೇ ಕ್ಯಾನ್ಸರ್ ಪತ್ತೆ ಉಚಿತ ಸೇವೆ ಒದಗಿಸಲು ಮುಂದೆ ಬಂದಿರುವುದು ಸಂತಸದ ಸಂಗತಿ ಎಂದು ದಿನೇಶ್ ಗುಂಡೂರಾವ್ ಹರ್ಷ ವ್ಯಕ್ತಪಡಿಸಿದರು.