ನ್ಯೂಸ್

ಅಮೆರಿಕದ ಸುಂಕ ಸಂಘರ್ಷ, ಚೀನಾ ಆರ್ಥಿಕತೆ ಶೇ. 4.8ಕ್ಕೆ ಕುಸಿತ

ಹಾಂಗ್​ಕಾಂಗ್: ಚೀನಾದ ಆರ್ಥಿಕತೆ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಶೇ. 4.8ರಷ್ಟು ಬೆಳವಣಿಗೆಯಾಗಿದ್ದು ಇದು ಒಂದು ವರ್ಷದಲ್ಲೇ ಅತ್ಯಂತ ನಿಧಾನವಾದ ವೇಗವಾಗಿದೆ. ಅಮೆರಿಕದ ಜತೆಗಿನ ವ್ಯಾಪಾರ ಸಂಘರ್ಷ, ದುರ್ಬಲ ದೇಶೀಯ ಬೇಡಿಕೆ ಇದಕ್ಕೆ ಕಾರಣವಾಗಿದೆ. ಹಿಂದಿನ ತ್ರೖೆಮಾಸಿಕದಲ್ಲಿ ಶೇ. 5.2ರಷ್ಟು ಬೆಳವಣಿಗೆ ದಾಖಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸಿದರೂ, ಕಂಪನಿಗಳು ತಮ್ಮ ಮಾರಾಟವನ್ನು ಇತರ ದೇಶಗಳ ಮಾರುಕಟ್ಟೆಗಳಿಗೆ ವರ್ಗಾಯಿಸಿದ್ದರಿಂದ ಚೀನಾದ ರಫ್ತು ಗಟ್ಟಿಯಾಗಿಯೇ ಉಳಿದಿದೆ.

ಚೀನಾದ ಆರ್ಥಿಕತೆ ಈ ವರ್ಷ ಶೇ. 4.8ರ ದರದಲ್ಲಿ ಬೆಳೆಯಬಹುದೆಂದು ವಿಶ್ವ ಬ್ಯಾಂಕ್ ಹೇಳಿದೆ. ಸರ್ಕಾರ ಶೇ. 5ರ ಬೆಳವಣಿಗೆಯ ನಿರೀಕ್ಷೆ ಹೊಂದಿದೆ. ಆರ್ಥಿಕ ತಜ್ಞರು ಈ ವರ್ಷದ ಕೊನೆಯಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್​ನಿಂದ ಬಡ್ಡಿದರ ಕಡಿತವನ್ನು ನಿರೀಕ್ಷಿಸುತ್ತಿದ್ದಾರೆ. ಇದು ಹೆಚ್ಚಿನ ಗ್ರಾಹಕ ವೆಚ್ಚ ಮತ್ತು ಹೂಡಿಕೆಯನ್ನು ಉತ್ತೇಜಿಸಬಹುದು ಎನ್ನಲಾಗಿದೆ.

ರಷ್ಯಾ ಜತೆ ದೋಸ್ತಿ ನಿಲ್ಲಿಸದಿದ್ದರೆ ಭಾರತದ ಮೇಲೆ ಭಾರಿ ಸುಂಕ- ಟ್ರಂಪ್​

ವಾಷಿಂಗ್ಟನ್: ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದರೆ ಭಾರಿ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂಬ ಭರವಸೆಯನ್ನು ತಾವು ಪ್ರಧಾನಿ ಮೋದಿ ಅವರಿಂದ ಪಡೆದಿರುವುದಾಗಿಯೂ ಅವರು ಪುನರುಚ್ಚರಿಸಿದ್ದಾರೆ. ಏರ್​ಫೋರ್ಸ್ ಒನ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಭಾರಿ ಸುಂಕ ಪಾವತಿಸುವುದನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು. ಮಾರುಕಟ್ಟೆ ಪರಿಸ್ಥಿತಿ ನೋಡಿಕೊಂಡು ಬೇರೆ ಬೇರೆ ದೇಶಗಳಿಂದ ತೈಲ ಖರೀದಿ ಮಾಡುವುದಾಗಿ ಭಾರತ ಹೇಳಿತ್ತು ಎಂಬುದನ್ನು ಸುದ್ದಿಗಾರರು ಅವರ ಗಮನಕ್ಕೆ ತಂದಾಗ, ‘ಭಾರತ ಅಂತಹ ಹೇಳಿಕೆ ನೀಡಿದೆ ಎಂದು ನಾನು ನಂಬುವುದಿಲ್ಲ. ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಅವರು ತಿಳಿಸಿದ್ದಾರೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದರು.