ನ್ಯೂಸ್

ಗಗನನೌಕೆಗೆ ಕಲ್ಪನಾ ಚಾವ್ಲಾ ಹೆಸರು; ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ನೌಕೆ; ಖಾಸಗಿ ಸಂಸ್ಥೆಯಿಂದ ಗೌರವ

ನ್ಯೂಯಾರ್ಕ್​: ವಾಣಿಜ್ಯ ಉದ್ದೇಶಗಳಿಗಾಗಿ ಗಗನನೌಕೆಗಳನ್ನು ತಯಾರಿಸುವ ಖಾಸಗಿ ಸಂಸ್ಥೆಯೊಂದು ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಹೆಸರನ್ನು ಗಗನನೌಕೆಯೊಂದಕ್ಕೆ ಇರಿಸುವ ಮೂಲಕ ಗೌರವ ಸಲ್ಲಿಸಿದೆ.

ಅಮೆರಿಕದ ಖಾಸಗಿ ವಾಣಿಜ್ಯ ಸರಕು ಸಾಗಣೆ ಸಂಸ್ಥೆ ನಾರ್ಥ್​ರಾಪ್​ ಗ್ರಮ್ಮನ್​ ಈ ಗೌರವ ನೀಡಿದೆ. ಸೆಪ್ಟಂಬರ್​ 29ರಂದು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಕೇಂದ್ರಕ್ಕೆ ತೆರಳುವ ಗಗನನೌಕೆಗೆ ಎಸ್​.ಎಸ್​​. ಕಲ್ಪನಾ ಚಾವ್ಲಾ ಹೆಸರಿಟ್ಟಿರುವುದಾಗಿ ಹೇಳಿದೆ. ನಾಸಾ ಗಗನಯಾನಿಯಾಗಿದ್ದ ಕಲ್ಪನಾ ಚಾವ್ಲಾ ಬಾಹ್ಯಾಕಾಶ ಸಂಶೋಧನೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಿರುವುದಾಗಿ ತಿಳಿಸಿದೆ.

ಭಾರತದ ಮೊದಲ ಮಹಿಳಾ ಗಗನಯಾನಿಯಾಗಿ ನಾಸಾದಲ್ಲಿ ಇತಿಹಾಸ ಸೃಷ್ಟಿಸಿದ ಕಲ್ಪನಾ ಚಾವ್ಲಾ ಅವರನ್ನು ಈ ಮೂಲಕ ಗೌರವಿಸುತ್ತಿರುವುದಾಗಿ ಸಂಸ್ಥೆ ಟ್ವೀಟ್​ ಮಾಡಿದೆ. ಈ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ 3,629 ಕೆಜಿಗಳಷ್ಟು ಸರಕನ್ನು ಸಾಗಿಸುತ್ತಿದೆ.

ಹರಿಯಾಣದ ಕರ್ನಾಲ್​ನಲ್ಲಿ 1962ರ ಮಾರ್ಚ್​ 17ರಂದು ಜನಿಸಿದ ಕಲ್ಪನಾ ಚಾವ್ಲಾ, ಪಂಜಾಬ್​ ಇಂಜಿನಿಯರಿಂಗ್​ ಕಾಲೇಜಿನಿಂದ ಪದವಿ ಪಡೆದರು. ಬಳಿಕ ಅಮೆರಿಕಕ್ಕೆ ತೆರಳಿ ಟೆಕ್ಸಾಸ್​ ವಿವಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ, ಕೊಲರಾಡೋ ವಿವಿಯಿಂದ ಪಿ.ಎಚ್​ಡಿ ಪಡೆದರು.  ವಾಣಿಜ್ಯ ವಿಮಾನ ಚಾಲನೆಗೆ ಪರವಾನಗಿಯನ್ನು ಪಡೆದುಕೊಂಡರು. ಸೀಪ್ಲೇನ್​ ಹಾಗೂ ಗ್ಲೈಡರ್​ಗಳ ಹಾರಾಟದಲ್ಲೂ ಪರಿಣತಿ ಗಳಿಸಿದ್ದರು. 1988ರಲ್ಲಿ ನಾಸಾ ಸೇರಿಸಿಕೊಂಡರು. ಅಮೆರಿಕದ ಪೌರತ್ವ ಪಡೆದ ಬಳಿಕ 1994ರಲ್ಲಿ ನಾಸಾ ಗಗನಯಾನಿಗಳ ತರಬೇತಿಗೆ ಆಯ್ಕೆಯಾದರು

1996ರಲ್ಲಿ ಮೊದಲ ಬಾರಿಗೆ ಗಗನಯಾನ ಮಾಡಿದರು. 2003ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳುತ್ತಿದ್ದ ಗಗನನೌಕೆ ದುರಂತದಲ್ಲಿ ಮೃತಪಟ್ಟರು.