ನವದೆಹಲಿ: ಎರಡು ದಿನಗಳ ಭಾರತ ಪ್ರವಾಸದ ಅಂತಿಮ ದಿನವಾದ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಟ್ರಂಪ್ ದಂಪತಿ ಗೌರವಾರ್ಥ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಔತಣಕೂಟ ಏರ್ಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಟ್ರಂಪ್ ದಂಪತಿ ಔತಣಕೂಟದಲ್ಲಿ ಭಾಗಿಯಾಗಿರುವ ಗಣ್ಯರೊಂದಿಗೆ ಹಸ್ತಲಾಘವ ಮಾಡುವುದರೊಂದಿಗೆ ಖುದ್ದಾಗಿ ಪರಿಚಯಿಸಿಕೊಂಡಿದ್ದು ವಿಶೇಷವಾಗಿತ್ತು.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್ ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸೇರಿದಂತೆ ಕೇಂದ್ರದ ಸಚಿವರು ಭಾಗಿಯಾಗಿದ್ದಾರೆ. ಅಲ್ಲದೆ, ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ ಕೂಡ ಉಪಸ್ಥಿತರಿದ್ದಾರೆ.
ಇದಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್ ದಂಪತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪತ್ನಿ ಸವಿತಾ ಕೋವಿಂದ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಔತಣಕೂಟ ಮುಗಿದ ಬಳಿಕ ಟ್ರಂಪ್ ದಂಪತಿ ರಾತ್ರಿ 10 ಗಂಟೆಗೆ ಅಮೆರಿಕಗೆ ನಿರ್ಗಮಿಸಲಿದ್ದಾರೆ. (ಏಜೆನ್ಸೀಸ್)