ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ದಿನ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಚರ್ಚೆ ಜೋರಾಗಿದೆ.
ಕೆಲವರಂತೂ ಮೀಮ್ಸ್ಗಳನ್ನು, ವಿವಿಧ ವಿಡಿಯೋಗಳನ್ನು ಪೋಸ್ಟ್ ಮಾಡಿ ಹಾಕುತ್ತಿದ್ದಾರೆ. ಭಾರತ-ಅಮೆರಿಕದ ನಡುವಿನ ಸ್ನೇಹಕ್ಕೆ ಈ ಭೇಟಿ ಸಾಕ್ಷಿ ಎನ್ನುತ್ತಿರುವ ಕೆಲವು ನೆಟ್ಟಿಗರು ತಮ್ಮ ಕೌಶಲಕ್ಕೆ ತಕ್ಕಂತೆ ಟ್ವೀಟ್, ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಈ ಮಧ್ಯೆ sol ಎಂಬ ವೆರಿಫೈಡ್ ಅಲ್ಲದ ಟ್ವಿಟರ್ ಅಕೌಂಟ್ವೊಂದು ಬಾಹುಬಲಿ ಸಿನಿಮಾದ ತುಣುಕನ್ನು ಟ್ವೀಟ್ ಮಾಡಿದೆ. ಪ್ರಸಿದ್ಧ ಬಾಹುಬಲಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದ ಪ್ರಭಾಸ್ ಮುಖವಿದ್ದಲ್ಲಿ ಡೊನಾಲ್ಡ್ ಟ್ರಂಪ್ ಮುಖವನ್ನು ಅಂಟಿಸಿ, ಎಡಿಟ್ ಮಾಡಿದ ವಿಡಿಯೋ ಇದಾಗಿದೆ. ಅದರಲ್ಲಿ ಟ್ರಂಪ್ ಮುಖವುಳ್ಳ ನಾಯಕ ಶತ್ರುಗಳೊಂದಿಗೆ ಹೋರಾಡುವುದು, ಕುದುರೆ ಓಡಿಸುವುದನ್ನು ನೋಡಬಹುದು.
ವಿಡಿಯೋವನ್ನು ಪೋಸ್ಟ್ ಮಾಡಿದ್ದ sol ನಲ್ಲಿ, ಟ್ರಂಪ್ ಅವರ ಭಾರತದ ಭೇಟಿಯ ಬಗ್ಗೆ ನನ್ನ ಮನಸಿನಲ್ಲಿ ಏನು ಓಡುತ್ತಿದೆ ಎಂಬುದನ್ನು ಈ ವಿಡಿಯೋ ಮೂಲಕ ತೋರಿಸಿದ್ದೇನೆ ಎಂದು ಕ್ಯಾಪ್ಷನ್ ಬರೆಯಲಾಗಿತ್ತು. ಎಡಿಟೆಡ್ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಶೋದಾ ಬೆನ್, ಟ್ರಂಪ್ ಪುತ್ರಿ ಇವಾಂಕಾ, ಪತ್ನಿ ಮೆಲಾನಿಯಾ ಕೂಡ ಇದ್ದಾರೆ.
ಇದೇ ವಿಡಿಯೋವನ್ನು ಡೊನಾಲ್ಡ್ ಟ್ರಂಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಭಾರತದಲ್ಲಿನ ನನ್ನ ಆತ್ಮೀಯ ಸ್ನೇಹಿತರನ್ನು ನೋಡಲು ಕಾತರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಎಡಿಟೆಡ್ ವಿಡಿಯೋವನ್ನು ಎರಡೂವರೆ ಮಿಲಿಯನ್ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಟ್ರಂಪ್ ರೀಟ್ವೀಟ್ ಮಾಡಿಕೊಂಡಿರುವ ಪೋಸ್ಟ್ಗೇ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ಗಳು ಬಂದಿವೆ. 38 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಇದರೊಂದಿಗೆ ಪರ-ವಿರೋಧ ಕಾಮೆಂಟ್ಗಳೂ ಬಂದಿವೆ.(ಏಜೆನ್ಸೀಸ್)