ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಪಾಸ್ಪೋರ್ಟ್ ಸಂಗ್ರಹ ಪ್ರಕ್ರಿಯೆಗೆ ಬದಲಾವಣೆ ತಂದಿದ್ದು, ಮೂರನೇ ವ್ಯಕ್ತಿ ಬಂದು ಪಾಸ್ಪೋರ್ಟ್ ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹೇರಿದೆ. ಅರ್ಥಾತ್, ಎಲ್ಲ ವೀಸಾ ಅರ್ಜಿದಾರರು ತಾವೇ ಸ್ವತಃ ಬಂದು ಪಾಸ್ಪೋರ್ಟ್ ಸ್ವೀಕರಿಸುವಂಥ ಪ್ರಕ್ರಿಯೆ ಆ.1ರಿಂದ ಜಾರಿಗೆ ತರಲಾಗಿದೆ. ಅರ್ಜಿದಾರರ ಖಾಸಗಿತನದ ಭದ್ರತೆ ಸಲುವಾಗಿ ಪಾಸ್ಪೋರ್ಟ್-ವೀಸಾ ಪ್ರಕ್ರಿಯೆಯಲ್ಲಿ ಈ ಬದಲಾವಣೆ ತರಲಾಗಿದೆ. ಇದಕ್ಕೂ ಮೊದಲು ನವದೆಹಲಿ ರಾಯಭಾರ ಕಚೇರಿ ಸೇರಿದಂತೆ ಕೆಲವೆಡೆ ಅರ್ಜಿದಾರರು ಖುದ್ದಾಗಿ ಬರಲಾಗದ ಸಂದರ್ಭದಲ್ಲಿ ಅವರ ಪರವಾಗಿ ನಂಬಿಕಸ್ಥ ಪ್ರತಿನಿಧಿಗಳು ಪಾಸ್ಪೋರ್ಟ್ ಪಡೆದುಕೊಂಡು ಹೋಗುವಂಥ ವ್ಯವಸ್ಥೆ ಇತ್ತು.
ಆದರೆ ಈಗ ಸುರಕ್ಷತೆ ಹಿನ್ನೆಲೆಯಲ್ಲಿ ಆ ವ್ಯವಸ್ಥೆ ತೆಗೆಯಲಾಗಿದೆ. ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ಪಾಲಕರು ಇಲ್ಲವೇ ಪಾಲಕರಿಂದ ಸಹಿ ಮಾಡಲಾದ ಒಪ್ಪಿಗೆ ಪತ್ರದೊಂದಿಗೆ ಕಾನೂನುಬದ್ಧ ಪೋಷಕರು ಬಂದು ಪಡೆದುಕೊಳ್ಳಬಹುದಾಗಿದೆ. ಈ ಒಪ್ಪಿಗೆ ಪತ್ರ ಸ್ಕಾ್ಯನ್ ಅಥವಾ ಇ-ಮೇಲ್ ಪ್ರತಿಯಾಗಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದೂ ತಿಳಿಸಲಾಗಿದೆ. ಪಾಸ್ಪೋರ್ಟ್ ಪಡೆದುಕೊಳ್ಳುವಾಗ ಭಾರತ ಸರ್ಕಾರ ನೀಡಿದ ವಿಳಾಸಸಹಿತ ಗುರುತಿನ ಚೀಟಿಯ ಮೂಲಪ್ರತಿ ಜತೆಗೆ ಒಂದು ನಕಲು ಪ್ರತಿ ಅಗತ್ಯ. ಅಪ್ರಾಪ್ತ ವಯಸ್ಕರಾಗಿದ್ದರೆ ಅವರ ಜನ್ಮಪ್ರಮಾಣಪತ್ರದ ಜತೆಗೆ ಶಾಲಾ ಗುರುತಿನ ಚೀಟಿ ಕೂಡ ಬೇಕಾಗುತ್ತದೆ.
ಡೋರ್ ಡೆಲಿವರಿ ಲಭ್ಯ
ಅರ್ಜಿದಾರರು ಮನೆ ಅಥವಾ ಕಚೇರಿಗೆ ಡೆಲಿವರಿ ಮಾಡಿಸಿಕೊಳ್ಳಲಿಕ್ಕೂ ಅವಕಾಶ ಕಲ್ಪಿಸಲಾಗಿದೆ. ಯುಎಸ್ಟ್ರಾವೆಲ್ಡಾಕ್ಸ್.ಕಾಮ್ ಮೂಲಕ 1,200 ರೂ. ನೀಡಿ ಆನ್ಲೈನ್ ಮೂಲಕ ತರಿಸಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ.