ನ್ಯೂಸ್

ಸ್ನೇಹದಿಂದ ವೈರತ್ವಕ್ಕೆ ತಿರುಗಿದ ಅಮೆರಿಕ-ಇರಾನ್ ಸಂಬಂಧ

ಇತ್ತ ಪಾಕಿಸ್ತಾನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಡಬೇಕು ಎಂದು ಶಿಫಾರಸು ಮಾಡುತ್ತಿದ್ದರೆ, ಅತ್ತ ಟ್ರಂಪ್ ಇರಾನಿನ ಮೂರು ಪ್ರಮುಖ ಭೂಗತ ಅಣುಶಕ್ತಿ ಕೇಂದ್ರಗಳ ಮೇಲೆ ದಾಳಿ ಮಾಡಿದ್ದಾರೆ. ಇದರೊಂದಿಗೆ, ಅಧಿಕೃತವಾಗಿ ಅಮೆರಿಕವು ಇಸ್ರೇಲ್-ಇರಾನ್ ಯುದ್ಧದಲ್ಲಿ ಪ್ರವೇಶಿಸಿದಂತಾಗಿದೆ. ಇದು, 1979ರಲ್ಲಿ ಇರಾನ್​ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಮೇಲೆ ಅಮೆರಿಕ ಮಾಡಿದ ಮೊದಲ ನೇರ ದಾಳಿಯಾಗಿದೆ.

‘ಇರಾನ್​ನ ಅಣು ಬಾಂಬ್ ಹೊಂದುವ ಕನಸುಗಳು ಸಮಾಧಿಯಾಗಿವೆ. ತಕ್ಷಣವೇ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನಿನ ಸೇನಾ ನೆಲೆಗಳನ್ನು ಸಂಪೂರ್ಣ ನಾಶಮಾಡುತ್ತೇವೆ’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್-ಅಮೆರಿಕ ಸಂಬಂಧದ ಇತಿಹಾಸ: ಇರಾನ್ ಮತ್ತು ಅಮೆರಿಕ ನಡುವಿನ ಸಂಬಂಧವು 1920ರ ದಶಕದಲ್ಲಿ ಸ್ನೇಹಪೂರ್ಣವಾಗಿ ಪ್ರಾರಂಭವಾಯಿತು. 1953ರಲ್ಲಿ ಇರಾನ್​ನ ಪ್ರಧಾನಿ ಮೊಹಮ್ಮದ್ ಮಸದೆಘ್ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿದಾಗ, ಬ್ರಿಟನ್ ಹಾಗೂ ಅಮೆರಿಕಕ್ಕೆ ಆಘಾತವಾಯಿತು. ಅಮೆರಿಕದ ಸಿಐಎ ಮತ್ತು ಬ್ರಿಟಿಷ್ ಎಂಐ 6 ಗೂಢಚರ ಸಂಸ್ಥೆಗಳು ಪ್ರಧಾನಿ ಮಸದೆಘ್ ಅವರನ್ನು ಉರುಳಿಸಿ ಶಾ ಅವರನ್ನು ಪುನಃ ಅಧಿಕಾರಕ್ಕೆ ತಂದವು. ಈ ಹಸ್ತಕ್ಷೇಪದಿಂದ ಇರಾನ್ ಜನರಲ್ಲಿ ಅಮೆರಿಕದ ವಿರುದ್ಧ ಆಕ್ರೋಶ ಮೂಡಿತು.

1979ರಲ್ಲಿ ಇಸ್ಲಾಮಿಕ್ ಕ್ರಾಂತಿ ಸಂಭವಿಸಿ, ಅಯಾತೊಲ್ಲಾ ಖೊಮೇನಿ ಅಧಿಕಾರಕ್ಕೆ ಬಂದು ಅಮೆರಿಕ ವಿರುದ್ಧ ತಿರುಗಿಬಿದ್ದರು. ಇದರ ಪರಿಣಾಮವೆಂಬಂತೆ, ಇರಾನ್​ನ ಯುವಕರು ಅಮೆರಿಕದ ತೆಹರಾನ್ ರಾಯಭಾರ ಕಚೇರಿಗೆ ದಾಳಿ ಮಾಡಿ, 52 ಅಮೆರಿಕನ್ನರನ್ನು 444 ದಿನಗಳ ಕಾಲ ಬಂಧಿಯಾಗಿಟ್ಟರು. ಇದೇ, ಇತಿಹಾಸ ಪ್ರಸಿದ್ಧ ‘ಹಾಸ್ಟೆಜ್ ಕ್ರೖೆಸಿಸ್’. ಅಂದಿನಿಂದ ಇರಾನ್ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿತು. 1980ರ ದಶಕದಲ್ಲಿ ಇರಾನ್-ಇರಾಕ್ ಯುದ್ಧದಲ್ಲಿ ಅಮೆರಿಕವು ಇರಾಕ್​ಗೆ ಪರೋಕ್ಷ ಬೆಂಬಲ ನೀಡಿತು. 1988ರಲ್ಲಿ ಅಮೆರಿಕದ ನೌಕೆ ತಪ್ಪಾಗಿ ಇರಾನ್ ಏರ್​ಲೈನ್ಸ್ ವಿಮಾನವನ್ನು ಹೊಡೆದು, 290 ಜನರ ಸಾವುಂಟಾಯಿತು.

ಮೊದಲ ಬಾರಿ ಇರಾನ್​ನೊಂದಿಗೆ ನೇರವಾಗಿ ಮಾತುಕತೆ ನಡೆಸಿದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ. ಅವರ ಆಡಳಿತದಲ್ಲಿ, 2015ರಲ್ಲಿ ಜಂಟಿ ಸಮಗ್ರ ಕ್ರಿಯಾಯೋಜನೆ (Joint Comprehensive Plan of Action) ಅಣು ಒಪ್ಪಂದದ ಮೂಲಕ, ಇರಾನ್ ತನ್ನ ಅಣುಶಕ್ತಿ ಕಾರ್ಯಚಟುವಟಿಕೆಯನ್ನು ಮಿತಿಗೊಳಿಸಲು ಒಪ್ಪಿಕೊಂಡಿತು ಮತ್ತು ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಆರ್ಥಿಕ ನಿಷೇಧಗಳನ್ನು ಸಡಿಲಿಸಿದವು. ಇದು ತಾತ್ಕಾಲಿಕವಾಗಿ ಶಾಂತಿಯ ಹೆಜ್ಜೆ ಎನ್ನಿಸಿಕೊಂಡರೂ, ನಂತರ ಸಂಬಂಧ ಮತ್ತೆ ಹಳಸಿತು.

ಡೊನಾಲ್ಡ್ ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾದ ಬಳಿಕ, ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತು. 2018ರಲ್ಲಿ ಟ್ರಂಪ್ ಅಣು ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದು, ಇರಾನ್ ಮೇಲೆ ಕಠಿಣ ಆರ್ಥಿಕ ನಿಷೇಧಗಳನ್ನು ಪುನಃ ಹೇರಿದರು. ಇದು ಇರಾನ್​ನ ಆರ್ಥಿಕತೆಯನ್ನು ತೀವ್ರ ಸಂಕಷ್ಟಕ್ಕೆ ತಳ್ಳಿತು. 2020ರಲ್ಲಿ ಅಮೆರಿಕ ಇರಾನ್​ನ ಪ್ರಭಾವಿ ಸೇನಾ ನಾಯಕ ಕಾಸೇಮ್ ಸುಲೇಮಾನಿಯನ್ನು ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಿತು, ಇದರಿಂದ ಉಭಯ ದೇಶಗಳ ನಡುವೆ ನೇರ ಸಂಘರ್ಷದ ವಾತಾವರಣ ಉಂಟಾಯಿತು.

ಜೋ ಬೈಡೆನ್ 2020ರಲ್ಲಿ ಅಧ್ಯಕ್ಷರಾದ ನಂತರ, ಸಂಬಂಧ ಪುನಃ ಶಾಂತಿಯ ಮಾರ್ಗಕ್ಕೆ ತಿರುಗುವ ನಿರೀಕ್ಷೆ ಮೂಡಿತು. ಅಣು ಒಪ್ಪಂದವನ್ನು ಪುನರ್​ಸ್ಥಾಪಿಸಲು ಬೈಡೆನ್ ಪ್ರಯತ್ನಿಸಿದರು ಮತ್ತು ಸಂವಾದವನ್ನು ಉತ್ತೇಜಿಸಿದರು. ಆದರೆ ವಿಶ್ವಾಸದ ಕೊರತೆ ಮತ್ತು ರಾಜಕೀಯ ಅಸ್ಥಿರತೆಯಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಲಿಲ್ಲ. ಟ್ರಂಪ್ ತಮ್ಮ ಎರಡನೇ ಚುನಾವಣೆ ಪ್ರಚಾರದ ವೇಳೆ ಇರಾನನ್ನು ಅಮೆರಿಕದ ಶತ್ರು ನಂ.1 ಎಂದು ಬಣ್ಣಿಸಿದರು ಮತ್ತು ಜೆಸಿಪಿಎ ಅಣು ಒಪ್ಪಂದವನ್ನು ‘ವಿಶ್ವ ಭದ್ರತೆಗೆ ಮರಣಗಂಟೆ’ ಎಂದು ವ್ಯಾಖ್ಯಾನಿಸಿದರು. ಅಧಿಕಾರಕ್ಕೆ ಬಂದ ಬಳಿಕ ಮತ್ತಷ್ಟು ಕಠಿಣ ನಿಲುವು ತೆಗೆದುಕೊಂಡರು. ಇಸ್ರೇಲ್​ನ ಭದ್ರತೆಯನ್ನು ಉಲ್ಲೇಖಿಸಿ, ಇರಾನ್​ನ ಅಣು ಸ್ಥಾಪನೆಗಳನ್ನು ನಾಶಮಾಡುವುದು ಅನಿವಾರ್ಯ ಎಂದರು. ಅವರು ಇಸ್ರೇಲ್​ನೊಂದಿಗೆ ಸೈನಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಿದರು ಮತ್ತು ಗುಪ್ತಚರ ಮಾಹಿತಿ ಹಂಚಿಕೆಯನ್ನು ವಿಸ್ತರಿಸಿದರು.

ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ಪ್ರಾರಂಭಿಸಿದೆ. ಜೊತೆಗೆ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಚೀನಾ ಮತ್ತು ರಷ್ಯಾಗಳು ಇರಾನ್​ಗೆ ಶಸ್ತ್ರಾಸ್ತ್ರ ಪೂರೈಕೆ ಹೆಚ್ಚು ಮಾಡುವ ಲಕ್ಷಣಗಳಿವೆ. ಇದು ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡುತ್ತದೆಯೇ? ಇಲ್ಲ ಎಂಬ ಉತ್ತರ ತಾತ್ಕಾಲಿಕವಾಗಿ ಸಮರ್ಪಕವಿದೆಯಾದರೂ, ಪರಿಸ್ಥಿತಿ ಬಹಳ ನಾಜೂಕಾಗಿದೆ.

ಭಾರತಕ್ಕೆ ಸವಾಲು: ಭಾರತವು ಅಮೆರಿಕ ಮತ್ತು ಇಸ್ರೇಲ್​ನೊಂದಿಗೆ ರಕ್ಷಣಾತ್ಮಕ ಮತ್ತು ತಂತ್ರಜ್ಞಾನ ಸಂಬಂಧ ಹೊಂದಿದ್ದರೆ, ಇರಾನ್​ನೊಂದಿಗೆ ಶತಮಾನಗಳ ಕಾಲದಿಂದ ಇಂಧನ, ವ್ಯಾಪಾರ ಮತ್ತು ಸಾಂಸ್ಕೃತಿಕ ಬಾಂಧವ್ಯವಿದೆ. ಇಂಧನ ಬೆಲೆ ಏರಿಕೆಯ ಸಾಧ್ಯತೆ ಹಾಗೂ ಮಧ್ಯಪೂರ್ವದಲ್ಲಿರುವ ಲಕ್ಷಾಂತರ ಭಾರತೀಯ ಕಾರ್ವಿುಕರ ಭದ್ರತೆ ಇವುಗಳೆಲ್ಲವೂ ದೊಡ್ಡ ಸವಾಲಾಗಲಿವೆ. ಜೊತೆಗೆ ಇತ್ತೀಚಿಗೆ ಪಾಕಿಸ್ತಾನವು ಅಮೆರಿಕಾಗೆ ಹತ್ತಿರ ಆಗುತ್ತಿದೆ. ಈ ಹಿನ್ನೆಲೆಯಲ್ಲಿ, ಭಾರತ ತಟಸ್ಥ, ಸಂಯಮ ಹಾಗೂ ಸಮತೋಲನದ ರಾಜತಂತ್ರವನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ.

(ಲೇಖಕರು ಅಮೆರಿಕದ ನ್ಯೂಯಾರ್ಕ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹವ್ಯಾಸಿ ಬರಹಗಾರರು)