ಈ ಸಾರಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ತೀವ್ರ ಹಣಾಹಣಿ ಕಣವಾಗಿದೆ. 54 ರಾಜ್ಯ ಮತ್ತು ಅಮೆರಿಕ ಆಡಳಿತ ಪ್ರದೇಶಗಳ ಪೈಕಿ ಬಹುತೇಕ ಎಲ್ಲ ರಾಜ್ಯಗಳ ಫಲಿತಾಂಶ ಪ್ರಕಟವಾಗಿದ್ದು, ಐದು ರಾಜ್ಯಗಳಲ್ಲಿ ತೀವ್ರ ಸೆಣಸಾಟ ನಡೆದಿದೆ. ಈ ರಾಜ್ಯಗಳ ಪೈಕಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ರಾಜ್ಯಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಒಂದರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಡೆನ್ ಇಲ್ಲಿ ಗೆದ್ದರೆ ಅವರಿಗೆ ಶ್ವೇತಭವನ ಪ್ರವೇಶಿಸುವ ಮಾರ್ಗ ಸಲೀಸಾಗಲಿದೆ. ಆದರೆ, ಟ್ರಂಪ್ ಐದೂ ರಾಜ್ಯಗಳಲ್ಲಿ ಬಿಡೆನ್ಗಿಂತ ಹೆಚ್ಚು ಮತಗಳಿಸಬೇಕಿದೆ. ಹೀಗಾಗಿ ಚಂಚಲೆಯಾಗಿರುವ ವಿಜಯ ಲಕ್ಷ್ಮಿ ಯಾರ ಕೊರಳಿಗೆ ಮಾಲೆ ಹಾಕುವಳೋ ಎಂಬುದು ಅಮೆರಿಕ ಮಾತ್ರವಲ್ಲ ಇಡೀ ಜಗತ್ತನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಫಲಿತಾಂಶ ಪ್ರಕಟವಾಗದ ರಾಜ್ಯಗಳು
ಅಲಾಸ್ಕಾ, ಪೆನ್ಸಿಲ್ವೇನಿಯಾ, ಉತ್ತರ ಕರೋಲಿನಾ, ಜಾರ್ಜಿಯಾದಲ್ಲಿ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದರೆ, ನೆವಾಡದಲ್ಲಿ ಬಿಡೆನ್ ಮುನ್ನಡೆಯಲ್ಲಿದ್ದಾರೆ. (ಪತ್ರಿಕೆ ಮುದ್ರಣದ ಹೊತ್ತಿಗೆ) ನೆವಾಡದಲ್ಲಿ ಬಿಡೆನ್ ಜಯಗಳಿಸಿದರೆ 6 ಎಲೆಕ್ಟೋರಲ್ ಕಾಲೇಜುಗಳು ಅವರ ಪರವಾಗಿ ಆಗುತ್ತದೆ. ಈ ಮೂಲಕ ಅವರು 270 ಎಲೆಕ್ಟೋರಲ್ಗಳ ಬೆಂಬಲಗಳಿಸಿ ಶ್ವೇತಭವನಕ್ಕೆ ಪ್ರವೇಶಿಸುತ್ತಾರೆ. ಆದರೆ, ಈ ರಾಜ್ಯದಲ್ಲಿ ತೀವ್ರ ಪೈಪೋಟಿ ಇದ್ದು, ಬಿಡೆನ್ ಶೇ. 49.3 ಮತ್ತು ಟ್ರಂಪ್ ಶೇ 48.7 ಮತಗಳಿಸಿದ್ದರೆ ಅಂತರದ ಪ್ರಮಾಣ ಶೇ. 0.6 ಇದೆ. ತೀವ್ರ ಪೈಪೋಟಿ ಇರುವ ಇನ್ನೊಂದು ರಾಜ್ಯ ಜಾರ್ಜಿಯಾ. ಇಲ್ಲಿ ಬಿಡೆನ್ ಶೇ.49.2, ಟ್ರಂಪ್ ಶೇ. 49.6 ಮತಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇಲ್ಲಿ ಉಭಯ ಅಭ್ಯರ್ಥಿಗಳ ಮಧ್ಯೆ ಅಂತರ ಶೇ. 04. ಟ್ರಂಪ್ ತಾವು ಮುನ್ನಡೆಯಲ್ಲಿರುವ ರಾಜ್ಯಗಳ ಜತೆಗೆ ತೀವ್ರ ಹಣಾಹಣಿ ಇರುವ ನೆವಾಡದಲ್ಲೂ ಜಯಗಳಿಸಿದರೆ ಇನ್ನೂ ನಾಲ್ಕು ವರ್ಷ ಶ್ವೇತಭವನದಲ್ಲೇ ಮುಂದುವರಿಯಬಹುದಾಗಿದೆ.
ಡೆಮಾಕ್ರಟರ ಸಂಭ್ರಮ
ಕಾಂಗ್ರೆಸ್ಗೆ ಕನ್ನಡಿಗ ಥಾಣೆದಾರ್ ಆಯ್ಕೆ
ಕರ್ನಾಟಕದ ಬೆಳಗಾವಿ ಮೂಲದ ಶ್ರೀ ಥಾಣೆದಾರ್ (ಡೆಮಾಕ್ರಟಿಕ್) ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್ಗೆ ಆಯ್ಕೆಯಾಗಿದ್ದಾರೆ. ಮಿಚಿಗನ್ನ 3ನೇ ಜಿಲ್ಲೆಯಲ್ಲಿ ಶೇ. 93 ಮತ ಗಳಿಸುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಚಂಡ ವಿಜಯ ಸಾಧಿಸಿದ್ದಾರೆ. ಬೆಳಗಾವಿ ಶಹಾಪುರ ತಾಲ್ಲೂಕಿನ ಮೀರಾಪುರದ ಮಧ್ಯಮ ವರ್ಗದ ಕುಟುಂಬದ ಆರು ಮಕ್ಕಳಲ್ಲಿ ಒಬ್ಬರಾದ ಥಾಣೆದಾರ್, ಚಿಂತಾರಮಣರಾವ್ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿ, 18ನೇ ವಯಸ್ಸಿನಲ್ಲಿ ವಿಜಯಪುರದ ಬ್ಯಾಂಕೊಂದರಲ್ಲಿ ಕೆಲಸ ಆರಂಭಿಸಿದ್ದರು. 24ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ ಅವರು ಪ್ರಸಿದ್ಧ ವಿಜ್ಞಾನಿ, ಉದ್ಯಮಿ ಹಾಗೂ ರಾಜಕಾರಣಿ. ಅವರು ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ರಾಜ್ಯಪಾಲರ ಹುದ್ದೆಗೂ ಸ್ಪರ್ಧಿಸಿದ್ದರು.
ವಿಸ್ಕಾನ್ಸಿನ್ನಲ್ಲಿ ಪೋಟೋ ಫಿನಿಶ್!
ವಿಸ್ಕಾನ್ಸಿನ್ ಮತ್ತು ಮಿಚಿಗನ್ಗಳಲ್ಲಿ ‘ಫೋಟೋ ಫಿನಿಶ್’ ಪೈಪೋಟಿ ಇದ್ದ ಕಾರಣ, ಟ್ರಂಪ್ ಮತ್ತು ಅವರ ಬೆಂಬಲಿಗರು ಮರು ಎಣಿಕೆಗೆ ಪಟ್ಟು ಹಿಡಿದಿದ್ದಾರೆ. ವಿಸ್ಕಾನ್ಸಿನ್ನಲ್ಲಿ ಬಿಡೆನ್ ಶೇ. 49.6 ಮತ್ತು ಟ್ರಂಪ್ ಶೇ. 48.9 ಹಾಗೂ ಮಿಚಿಗನ್ನಲ್ಲಿ ಬಿಡೆನ್ ಶೇ. 51 ಮತ್ತು ಟ್ರಂಪ್ ಶೇ. 48 ಮತಗಳಿಸಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಬಿಡೆನ್ ಎಲೆಕ್ಟೋರಲ್ ಕಾಲೇಜುಗಳ ಬೆಂಬಲ ಪಡೆದಿದ್ದಾರೆ. ವಿಸ್ಕಾನ್ಸಿನ್ಗಳಲ್ಲಿ ಅಲ್ಪ ಅಂತರದಿಂದ ಬಿಡೆನ್ಗೆ ಜಯಮಾಲೆ. ಮರು ಎಣಿಕೆಗೆ ಟ್ರಂಪ್ ಆಗ್ರಹ. ಮಿಚಿಗನ್ನಲ್ಲಿ ಮತದಾನ ಸ್ಥಗಿತಗೊಳಿಸಲು ಟ್ರಂಪ್ ಬೆಂಬಲಿಗರೂ ಯತ್ನಿಸಿದ್ದರು.
ಕೆಳಮನೆಯಲ್ಲಿ ಡೆಮಾಕ್ರಟಿಕ್ಗೆ ಮುನ್ನಡೆ
ಅಧ್ಯಕ್ಷೀಯ ಚುನಾವಣೆಗೆ ಜತೆಗೆ 435 ಬಲದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್ (ಸಂಸತ್ ಕೆಳಮನೆ), 100 ಸದಸ್ಯ ಬಲದ ಸೆನೆಟ್ನಲ್ಲಿ 35 ಸ್ಥಾನಕ್ಕೆ ಮಧ್ಯಂತರ ಚುನಾವಣೆ ನಡೆದಿದೆ. ಸೆನೆಟ್ನ 35ರ ಪೈಕಿ ಈವರೆಗೆ 13 ಸ್ಥಾನವನ್ನು ಡೆಮಾಕ್ರಟಿಕ್ ಪಕ್ಷ ಗೆದ್ದಿದ್ದರೆ, 18 ಸ್ಥಾನವನ್ನು ರಿಪಬ್ಲಿಕನ್ ಗೆದ್ದಿದೆ. ಸೆನೆಟ್ನಲ್ಲಿ ಎರಡೂ ಪಕ್ಷಗಳು ತಲಾ 48 ಸ್ಥಾನವನ್ನು ಹೊಂದಿವೆ. ಹೌಸ್ ಆಫ್ ರೆಪ್ರಸೆಂಟಿಟೀವ್ಸ್ನಲ್ಲಿ 205 ಸ್ಥಾನವನ್ನು ಡೆಮಾಕ್ರಟಿಕ್ ಪಕ್ಷ ಗೆದ್ದುಕೊಂಡಿದ್ದು, 190 ಸ್ಥಾನವನ್ನು ರಿಪಬ್ಲಿಕನ್ ಪಾರ್ಟಿ ತನ್ನದಾಗಿಸಿಕೊಂಡಿದೆ. ಮತ ಎಣಿಕೆ ಪ್ರಕಿಯೆ ಮುಂದುವರಿದಿದೆ.
ಕಳೆದ ರಾತ್ರಿ ನನ್ನ ಮುನ್ನಡೆ ಬಲಿಷ್ಠವಾಗಿತ್ತು. ನಂತರದಲ್ಲಿ ಒಂದೊಂದೇ ಮ್ಯಾಜಿಕ್ ಬೆಳವಣಿಗೆಗಳು ನಡೆದವು. ನಿಗೂಢವಾಗಿ ಬಂದ ಮತಪತ್ರಗಳನ್ನು ಎಣಿಕೆ ಮಾಡಲಾಯಿತು.| ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ
ಪ್ರಮಿಳಾ ಪಾಲಕರ ಸಂಭ್ರಮ
ಬೆಂಗಳೂರು: ಅಮೆರಿಕದ ಕಾಂಗ್ರೆಸ್ಗೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಪ್ರಮಿಳಾ ಜಯಪಾಲ್ ಜಯಗಳಿಸಿದ್ದು, ಬೆಂಗಳೂರಿನ ನಿವಾಸಿಗಳಾಗಿರುವ ಅವರ ತಂದೆ-ತಾಯಿ ಖುಷಿಯಲ್ಲಿ ತೇಲಿದ್ದಾರೆ. ಪ್ರಮಿಳಾ ಡೆಮಾಕ್ರಟಿಕ್ ಪಕ್ಷದಿಂದ ಸತತ ಮೂರನೇ ಬಾರಿಗೆ ಸಂಸತ್ನ ಕೆಳಮನೆಗೆ ಆಯ್ಕೆಯಾಗಿದ್ದಾರೆ. 1993ರಿಂದಲೂ ಬೆಂಗಳೂರಿನ ರಿಚ್ಮಂಡ್ ಟೌನ್ನಲ್ಲಿ ನೆಲೆಸಿರುವ ಎಂ.ಪಿ.ಜಯಪಾಲ್ ಹಾಗೂ ಲೇಖಕಿ ಮಾಯಾ ಜಯಪಾಲ್ ಅವರ ಕಿರಿ ಮಗಳಾದ ಪ್ರಮಿಳಾ, 16ನೇ ವಯಸ್ಸಿಗೆ ಅಮೆರಿಕಗೆ ತೆರಳಿ, ಅಲ್ಲಿ ನೆಲಸಿದ್ದಾರೆ. ಪ್ರಮಿಳಾ ಚೆನ್ನೈನಲ್ಲಿ ಜನಿಸಿದ್ದು, ಚೆನ್ನೈ ಮತ್ತು ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಜಕಾರ್ತ ಹಾಗೂ ಸಿಂಗಾಪುರದಲ್ಲಿ ಶಿಕ್ಷಣ ಮುಂದುವರಿಸಿದ್ದರು. ಬಳಿಕ ಅವರ ಪಾಲಕರು ಬೆಂಗಳೂರಿಗೆ ಆಗಮಿಸಿದ್ದು, ಇಲ್ಲಿಯೇ ನೆಲೆಸಿದ್ದಾರೆ. ಮಾಯಾ ಜಯಪಾಲ್ ಕೂಡ ಅಮೆರಿಕದಲ್ಲಿ ಕೌಂಟಿ ಕಮೀಷನರ್ ಆಗಿದ್ದಾರೆ.ಮಾಯಾ ಬೆಂಗಳೂರಿನ ಮೌಂಟ್ ಕಾರ್ವೆಲ್ ಶಾಲೆಯ ಹಳೆಯ ವಿದ್ಯಾರ್ಥಿನಿ. ಹಲವು ಕೃತಿಗಳನ್ನು ಕೂಡ ರಚಿಸಿದ್ದಾರೆ.
ಕುಕ್ಕೆಯಲ್ಲಿ ಕೃಷ್ಣಮೂರ್ತಿ ಹರಕೆ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಗೆಲುವು ದೊರಕಿಸಿಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದ ರಾಜಾ ಕೃಷ್ಣಮೂರ್ತಿ ಅಮೆರಿಕದ ಕೆಳಮನೆಗೆ ಸದಸ್ಯರಾಗಿ (ಇಲಿಯಾನ್ಸ್ನ 8ನೇ ಜಿಲ್ಲೆಯಿಂದ) ಮರು ಆಯ್ಕೆಯಾಗಿದ್ದಾರೆ. ಷಿಕಾಗೊದ ಹಿಂದು ದೇವಳದಲ್ಲಿ ಅರ್ಚಕರಾಗಿರುವ ನಾಗೇಂದ್ರ ರಾವ್ ಜತೆ ಕ್ಷೇತ್ರಕ್ಕೆ ಅವರು 2017ರ ಆಗಸ್ಟ್ನಲ್ಲಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಮಂಗಳವಾರ ಗೆಲುವು ಸಾಧಿಸಿದ ತಕ್ಷಣ ನಾಗೇಂದ್ರ ರಾವ್ ದೇವಳದ ಶಿಷ್ಟಾಚಾರ ವಿಭಾಗದ ಕೆ.ಎಂ.ಗೋಪಿನಾಥ್ ನಂಬೀಶಗೆ ವಾಟ್ಸ್ ಆಪ್ ಮೂಲಕ ಗೆಲುವಿನ ವಿಷಯ ತಿಳಿಸಿ, ರಾಜಾ ಕೃಷ್ಣಮೂರ್ತಿ ಹೆಸರಿನಲ್ಲಿ ಸೇವೆ ನೆರವೇರಿಸಲು ಕೋರಿದ್ದಾರೆ. ‘ರಾಜಾ ಕೃಷ್ಣಮೂರ್ತಿ 40 ವರ್ಷಗಳಿಂದ ಅಮೆರಿಕದಲ್ಲಿ ವಕೀಲರಾಗಿದ್ದು, ಎರಡು ಬಾರಿ ಸೆನೆಟ್ಗೆ ಸ್ಪರ್ಧಿಸಿ ಸೋತಿದ್ದರು. ಕುಕ್ಕೆಗೆ ಬಂದು ಸೇವೆ ಸಲ್ಲಿಸುವ ಸಂಕಲ್ಪ ಕೈಗೊಂಡ ಬಳಿಕ ಗೆಲುವು ಸಾಧಿಸಿದ್ದರು. ಅದರಂತೆ ಕ್ಷೇತ್ರಕ್ಕೆ ಬಂದು ದೇವರಿಗೆ ನಾಗಪ್ರತಿಷ್ಠೆ ಮತ್ತು ಪಂಚಾಮೃತ ಮಹಾಭಿಷೇಕ ಹರಕೆಯನ್ನು ತೀರಿಸಿದ್ದಲ್ಲದೆ, 2020ರ ಚುನಾವಣೆಯಲ್ಲೂ ವಿಜಯಿಯಾಗುವಂತೆ ಆಶೀರ್ವದಿಸಬೇಕೆಂದು ಪ್ರಾರ್ಥಿಸಿದ್ದರು’ ಎಂದು ಬಳಿಕ ನಾಗೇಂದ್ರ ರಾವ್ ಹೇಳಿದ್ದಾರೆ.
ನಾನು ಗೆದ್ದಿರುವೆ ಎಂದು ಈಗಲೇ ಹೇಳಲಾರೆ. ಆದರೆ, ಚುನಾವಣೆ ಗೆಲ್ಲಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 270ರತ್ತ ನಾವು ಸ್ಪಷ್ಟವಾಗಿ ಸಾಗುತ್ತಿದ್ದೇವೆ. ಸುದೀರ್ಘವಾದ ಎಣಿಕೆ ಕಾರ್ಯ ಮುಗಿದ ನಂತರ ಇದು ಖಾತ್ರಿ ಆಗಲಿದೆ. ಪ್ರಚಾರದ ವೇಳೆ ನಮ್ಮ ವಿರುದ್ಧ ಕಠಿಣ ವಾಕ್ಚಾತುರ್ಯದ ಪ್ರದರ್ಶನವೇ ನಡೆಯಿತು. ಈಗ ಅದಕ್ಕಿಂತ ಕೀಳುಮಟ್ಟದ ಮಾತುಗಳು ಕೇಳಿಬರುತ್ತಿವೆ.| ಜೋ ಬಿಡೆನ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಉಪಾಧ್ಯಕ್ಷ
ಬೆಂಬಲಿಗರಿಂದ ಪ್ರತಿಭಟನೆ
ವಾಷಿಂಗ್ಟನ್: ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಿನ್ನಡೆ ಕಂಡಿರುವುದರಿಂದ ಅಸಮಾಧಾನ ಮತ್ತು ಆಕ್ರೋಶಗೊಂಡಿರುವ ಅವರ ಬೆಂಬಲಿಗರು ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಎಡಪಂಥೀಯ ಗುಂಪುಗಳು ಜೋ ಬಿಡೆನ್ ಪರವಾಗಿ ರ‍್ಯಾಲಿ ನಡೆಸಿದ್ದು, ಚುನಾವಣಾ ಫಲಿತಾಂಶ ಸಮರ್ಪಕವಾಗಿದೆ ಎಂದು ಹೇಳಿವೆ. ವಾಷಿಂಗ್ಟನ್ನಲ್ಲಿ ಮೂವರಿಗೆ ಚೂರಿ ಇರಿತದ ಘಟನೆ ವರದಿಯಾಗಿದೆ. ಹಲವೆಡೆ ಮಳಿಗೆಗಳಲ್ಲಿ ದಾಂಧಲೆ ನಡೆಸಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಪ್ರತಿಭಟನೆಗೆ ಇಳಿದಿರುವುದರಿಂದ ಹಿಂಸಾಚಾರ ನಡೆದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಈ ಮಧ್ಯೆ, ಹಲವು ರಾಜ್ಯಗಳಲ್ಲಿ ಟ್ರಂಪ್ ಬೆಂಬಲಿಗರು ಕೋರ್ಟ್ಗಳಲ್ಲಿ ದೂರು ದಾಖಲಿಸಿದ್ದಾರೆ. ಬುಧವಾರ ಸಂಜೆ ಹೊತ್ತಿಗೆ ವಾಷಿಂಗ್ಟನ್, ಡೆನ್ವರ್, ಪೋರ್ಟ್ಲ್ಯಾಂಡ್, ಲಾಸ್ ಏಂಜಲೀಸ್, ಅಟ್ಲಾಂಟ, ಒಕ್ಲ್ಯಾಂಡ್, ಅರಿಜೋನಾದಲ್ಲಿ ಪ್ರತಿಭಟನೆಗಳ ಕಿಡಿಹತ್ತಿತು. ಗುಂಪು ಗುಂಪಾಗಿ ಸೇರಲು ಆರಂಭಿಸಿದ ಜನರನ್ನು ಪೊಲೀಸರು ವಶಕ್ಕೆ ಪಡೆದರು. ಡೆನ್ವರ್ನಲ್ಲಿ ಮೆರವಣಿಗೆ ನಡೆಸಿದವರನ್ನು ಚದುರಿಸಲಾಗಿದೆ. ಈ ವೇಳೆ ಕ್ಯಾಷ್ ಸೆಂಟರ್ನ ಕಿಟಕಿಗೆ ಪ್ರತಿಭಟನಾಕಾರರು ಹಾನಿ ಮಾಡಿದ್ದಾರೆ. ಪೋರ್ಟ್ಲ್ಯಾಂಡ್ ನಗರದಲ್ಲಿ ಪ್ರತಿಭಟನಾಕಾರರು ಮಳಿಗೆಗಳಲ್ಲಿ ದಾಂಧಲೆ ನಡೆಸಿದ್ದು, 10 ಮಂದಿಯನ್ನು ಬಂಧಿಸಲಾಗಿದೆ ಮತ್ತು ಅವರಿಂದ ಸ್ಫೋಟ ವಸ್ತುಗಳು, ರೈಫಲ್, ಸುತ್ತಿಗೆ ವಶಪಡಿಸಿಕೊಳ್ಳಲಾಗಿದೆ. ಅರಿಜೋನಾ, ಫೀನಿಕ್ಸ್ಗಳಲ್ಲಿ ಟ್ರಂಪ್ ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದಾರೆ.
ಬಿಡೆನ್ ಐತಿಹಾಸಿಕ ದಾಖಲೆ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತ್ಯಧಿಕ ಜನಪ್ರಿಯ ಮತ (ಪ್ಯಾಪುಲರ್ ವೋಟ್) ಪಡೆದ ಅಭ್ಯರ್ಥಿ ಎಂಬ ದಾಖಲೆಗೆ ಜೋ ಬಿಡೆನ್ ಪಾತ್ರರಾಗಿದ್ದಾರೆ ಎಂದು ಅಮೆರಿಕ ಮಾಧ್ಯಮದಲ್ಲಿ ವರದಿಯಾಗಿದೆ. ಪ್ಯಾಪುಲರ್ ಮತದಲ್ಲಿ ಅಧ್ಯಕ್ಷ ಟ್ರಂಪ್ಗಿಂತ ಬಿಡೆನ್ 20.70 ಲಕ್ಷ ಮತ ಮುಂದಿದ್ದಾರೆ. ಬಿಡೆನ್ 7.70 ಕೋಟಿ ಮತವನ್ನು ಪಡೆಯುವ ಮೂಲಕ 2008ರಲ್ಲಿ ಬರಾಕ್ ಒಬಾಮ (6.94 ಕೋಟಿ ಮತ) ಸ್ಥಾಪಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಒಬಾಮ ಅಧ್ಯಕ್ಷರಾಗಿದ್ದ ಎರಡೂ ಅವಧಿಯಲ್ಲಿ ಬಿಡೆನ್ ಉಪಾಧ್ಯಕ್ಷರಾಗಿದ್ದರು.
ಮರುಆಯ್ಕೆಯಲ್ಲಿ ಸೋಲುವ 5ನೇ ಅಭ್ಯರ್ಥಿ?
ಚುನಾವಣೆಯಲ್ಲಿ ಟ್ರಂಪ್ ಸೋಲುಂಡರೆ, 1992ರ ನಂತರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರುಆಯ್ಕೆ ಆಗದೆ ಸೋತ ಎರಡನೇ ಅಭ್ಯರ್ಥಿ ಟ್ರಂಪ್ ಆಗಲಿದ್ದಾರೆ. 1992ರಲ್ಲಿ ಜಾರ್ಜ್ ಎಚ್ ಬುಷ್ 2ನೇ ಬಾರಿಗೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅದಾದ ನಂತರ ಬಿಲ್ ಕ್ಲಿಂಟನ್, ಜರ್ಜ್ ಡಬ್ಲ್ಯೂ ಬುಷ್ ಮತ್ತು ಬರಾಕ್ ಒಬಾಮ 2ನೇ ಬಾರಿಗೆ ಗೆಲುವು ಸಾಧಿಸಿದ್ದರು. 100 ವರ್ಷದ ಇತಿಹಾಸದಲ್ಲಿ ಕೇವಲ ನಾಲ್ವರು ಮಾತ್ರವೇ 2ನೇ ಚುನಾವಣೆಯಲ್ಲಿ ಸೋಲು ಕಂಡ ಅಧ್ಯಕ್ಷರಾಗಿದ್ದಾರೆ.
ಮತಪತ್ರದಲ್ಲಿ ಯಾವುದೇ ನಿಗೂಢ ಇಲ್ಲ ಮತ್ತು ಅಚ್ಚರಿಯ ಬೆಳವಣಿಗೆಯೂ ಆಗಿಲ್ಲ. ಪೂರ್ವ ಮತದಾನ ಅಥವಾ ಅಂಚೆ ಮೂಲಕ ಚಲಾವಣೆಯಾದ ಅಧಿಕೃತ ಮತಪತ್ರಗಳು ಅವು. ಇಂಥ ಮತಪತ್ರಗಳ ಎಣಿಕೆ ತಡವಾಗುತ್ತದಷ್ಟೆ.| ಚುನಾವಣಾ ಆಯೋಗ