ನವದೆಹಲಿ: ಲಡಾಖ್ ಪೂರ್ವಭಾಗದಲ್ಲಿ ಜಮಾವಣೆಗೊಳಿಸಿದ್ದ ತನ್ನ ಸೇನೆಯನ್ನು ಹಿಂಪಡೆದುಕೊಳ್ಳುವ ಮೂಲಕ ಚೀನಾ ಆ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಸಹಕರಿಸುತ್ತಿದೆ. ಆದರೂ, ಜಾಗತಿಕ ರಾಜಕಾರಣದಲ್ಲಿ ಲಡಾಖ್ ಬಿಕ್ಕಟ್ಟಿನ ಪರಿಣಾಮಗಳು ಮಾತ್ರ ಢಾಳಾಗಿ ಕಾಣಿಸುತ್ತಲೇ ಇವೆ.
ಹೊಸ ವಿದ್ಯಮಾನವೊಂದರಲ್ಲಿ ಟಿಕ್ಟಾಕ್ ಸೇರಿ ಚೀನಾದ ಎಲ್ಲ ಆ್ಯಪ್ಗಳನ್ನು ನಿಷೇಧಿಸಲು ಅಮೆರಿಕ ಕೂಡ ಚಿಂತನೆ ಆರಂಭಿಸಿದೆ. ಈ ವಿಷಯವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್ ಪಾಂಪಿಯೋ ಖಚಿತಪಡಿಸಿದ್ದಾರೆ.
ನಾನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ದೊಡ್ಡವನಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಟಿಕ್ಟಾಕ್ ಸೇರಿ ಚೀನಾದ ಎಲ್ಲ ಆ್ಯಪ್ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವ ವಿಷಯವನ್ನು ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ದಟ್ಟವಾಗಿ ಮೂಡಿದೆ. ಚೀನಾದ ಎಲ್ಲ ಸರಕುಗಳನ್ನು ತಿರಸ್ಕರಿಸಲು ಇಡೀ ಭಾರತ ಅಲಿಖಿತವಾಗಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಟಿಕ್ಟಾಕ್ ಸೇರಿ ಚೀನಾದ ಒಟ್ಟು 59 ಆ್ಯಪ್ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಕೂಡ ಇದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದೆ ಎನ್ನಲಾಗಿದೆ.