ಚೀನಾ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ವ್ಯಾಪಾರ ಸಮರ ಉಲ್ಬಣವಾಗಿರುವುದು ಭಾರತದ ಪಾಲಿಗೆ ಹಲವು ಕ್ಷೇತ್ರಗಳಲ್ಲಿ ವರವಾಗಿ ಪರಿಣಮಿಸತೊಡಗಿದೆ. ಈ ಕುರಿತು ಆಯಾ ಕ್ಷೇತ್ರಗಳ ಪರಿಣತರು ಮತ್ತು ಸಂಸ್ಥೆಗಳಿಂದಲೇ ಮುಕ್ತ ಅಭಿಪ್ರಾಯಗಳು ಹೊರಬರುತ್ತಿವೆ. ಆ ಪೈಕಿ ಆಯ್ದ ವಲಯಗಳ ಕುರಿತ ಮಾಹಿತಿ ಇಲ್ಲಿದೆ.
ಎಲೆಕ್ಟ್ರಾನಿಕ್ಸ್ ರಫ್ತಿಗೆ ಶುಕ್ರದೆಸೆ: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಐಫೋನ್ಗಳು, ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಸ್, ಲ್ಯಾಪ್ಟಾಪ್ಗಳು ಇನ್ನು ಮುಂದೆ ಚೀನಾದ ಇವೇ ಉತ್ಪನ್ನಗಳಿಗೆ ಹೋಲಿಸಿದರೆ ಶೇಕಡ 20ರಷ್ಟು ಸೋವಿಯಾಗಲಿವೆ. ಟ್ರಂಪ್ ಆಡಳಿತ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶನಿವಾರ ಘೊಷಿಸಿರುವ ತೆರಿಗೆ ವಿನಾಯ್ತಿಯಿಂದಾಗಿ ಇದು ಸಾಧ್ಯವಾಗಲಿದೆ. ‘ಚೀನಾದ ಐಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ವಾಚ್ಗಳ ಮೇಲೆ ಈಗಲೂ ಶೇ. 20 ತೆರಿಗೆ ಇದೆ. ಪರಸ್ಪರ ತೆರಿಗೆಯನ್ನು ಮಾತ್ರ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ. ಅಮೆರಿಕಕ್ಕೆ ರಫ್ತು ಮಾಡುವ ಐಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್ಗಳ ಮೇಲೆ ಭಾರತಕ್ಕೆ ಸೊನ್ನೆ ತೆರಿಗೆ ಇದೆ. ವಿಯೆಟ್ನಾಮ್ೂ ಸೊನ್ನೆ ತೆರಿಗೆ ಇದೆ. ಹಾಗಾಗಿ ಚೀನಾಕ್ಕಿಂತ ಭಾರತ ಮತ್ತು ವಿಯೆಟ್ನಾಂ ಉತ್ಪನ್ನಗಳು ಸೋವಿ ಇರಲಿವೆ’ ಎಂದು ಇಂಡಿಯಾ ಸೆಲ್ಯುಲರ್ ಆಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಅಧ್ಯಕ್ಷ ಪಂಕಜ್ ಮೊಹಿಂದ್ರೂ ವಿಶ್ಲೇಷಿಸಿದ್ದಾರೆ. ಈ ಮಧ್ಯೆ, ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ತೆರಿಗೆ ವಿನಾಯ್ತಿ ಘೊಷಿಸಿರುವುದು ತಾತ್ಕಾಲಿಕವಾಗಿದ್ದು, ಸದ್ಯದಲ್ಲೇ ತೆರಿಗೆ ಪ್ರಕಟಿಸಲಾಗುವುದು ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಭಾನುವಾರ ರಾತ್ರಿ ಹೇಳಿದ್ದಾರೆ. ಇ-ಕಾಮರ್ಸ್ಗೆ ಅವಕಾಶಗಳ ಹೆಬ್ಬಾಗಿಲು: ಚೀನಾದಿಂದ ಕಡಿಮೆ ಮೊತ್ತದ ಇ-ಕಾಮರ್ಸ್ ಸರಕುಸಾಗಣೆಯನ್ನು ಅಮೆರಿಕ ಬಿಗಿಗೊಳಿಸಿರುವುದು ಭಾರತದ ಆನ್ಲೈನ್ ರಫ್ತುದಾರರಿಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಕೇಂದ್ರ ಸರ್ಕಾರ ಸಕಾಲಕ್ಕೆ ಬೆಂಬಲ ನೀಡಿದರೆ, ಅಧಿಕಾರಶಾಹಿ ಹಿಡಿತವನ್ನು ಸಡಿಲಗೊಳಿಸಿದರೆ ಆ ಅಂತರವನ್ನು ಭಾರತೀಯರು ತುಂಬಬಹುದು ಎಂದು ಗ್ಲೋಬಲ್ ಟ್ರೇಡ್ ರೀಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಇ-ಕಾಮರ್ಸ್ ಮಾರಾಟಗಾರರಿದ್ದು ಪ್ರಸ್ತುತ 5 ಶತಕೋಟಿ ಡಾಲರ್ಗಿಂತ ಹೆಚ್ಚಿನ ರಫ್ತು ನಡೆಯುತ್ತಿದೆ. ಕರಕುಶಲವಸ್ತುಗಳು, ಫ್ಯಾಷನ್, ಗೃಹಬಳಕೆ ವಸ್ತುಗಳು ಮುಂತಾದವುಗಳ ರಫ್ತಿನಲ್ಲಿ ಈಗ ಚೀನಾಕ್ಕೆ ಕೈತಪ್ಪಿರುವ ವ್ಯಾಪಾರಾವಕಾಶವನ್ನು ತುಂಬಲು ಭಾರತೀಯರು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ. ಚೀನಾ, ಹಾಂಗ್ಕಾಂಗ್ನಿಂದ ಅಮೆರಿಕಕ್ಕೆ 800 ಡಾಲರ್ಗಿಂತ ಕಡಿಮೆ ಮೊತ್ತದ ಇ-ಕಾಮರ್ಸ್ ಸರಕುಸಾಗಣೆ ಈಗ ಸುಂಕರಹಿತವಾಗಿದ್ದು, ಮೇಲೆ 2ರಿಂದ ಇದರ ಮೇಲೆ ಶೇ. 120ರಷ್ಟು ತೆರಿಗೆ ಬೀಳಲಿದೆ. ಇದರಿಂದ ಚೀನಾದ ಪೂರೈಕೆ ಸರಪಳಿ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದ್ದು ಭಾರತ ಸೇರಿದಂತೆ ಇತರ ದೇಶಗಳಿಗೆ ದೊಡ್ಡ ಅವಕಾಶ ಸಿಗಲಿದೆ.
ಅಮೆರಿಕ-ಚೀನಾ ಸುಂಕಸಮರದಿಂದಾಗಿ ಭಾರತದ ಆಟಿಕೆ ಉತ್ಪಾದನಾ ವಲಯಕ್ಕೆ ಸುವರ್ಣಾವಕಾಶ ಲಭಿಸಿದಂತಾಗಿದೆ ಎಂದು ಭಾರತೀಯ ಆಟಿಕೆ ಸಂಸ್ಥೆ (ಟಾಯ್ ಅಸೋಸಿಯೇಶನ್ ಆಫ್ ಇಂಡಿಯಾ) ಅಧ್ಯಕ್ಷ ಅಕ್ಷಯ್ ಬಿಂಜ್ರಾಜ್ಕಾ ಹೇಳಿದ್ದಾರೆ. ಚೀನಾದಿಂದ ಆಮದಾಗುವ ಆಟಿಕೆಗಳ ಮೇಲೆ ಅಮೆರಿಕ ಇತ್ತೀಚೆಗೆ ಶೇ. 145ರಷ್ಟು ತೆರಿಗೆ ಘೊಷಿಸಿದೆ. ಇದು ಇಡೀ ಜಗತ್ತಿನ ಆಟಿಕೆ ವ್ಯಾಪಾರವನ್ನೇ ಪುನರ್ರೂಪಿಸಲಿದೆ. ಅಮೆರಿಕದ ಆಟಿಕೆ ಆಮದಿನಲ್ಲಿ ಶೇ. 77ರಷ್ಟಿದ್ದ ಚೀನಾದ ಪಾಲು ಈಗ ಭಾರಿ ತೆರಿಗೆಯಿಂದಾಗಿ ಕುಸಿಯಲಿದ್ದು, ಆ ನಿರ್ವಾತವನ್ನು ಭರಿಸುವ ಅವಕಾಶ ಭಾರತ ಮತ್ತಿತರ ರಾಷ್ಟ್ರಗಳಿಗೆ ಲಭಿಸಲಿದೆ. ಭಾರತದ ಆಟಿಕೆಗಳು ಇನ್ನು ಮುಂದೆ ಚೀನಾದ ಆಟಿಕೆಗಳ ಜತೆ ಗುಣಮತ್ತು ಮತ್ತು ದರ ಎರಡೂ ವಿಷಯಗಳಲ್ಲಿ ಸ್ಪರ್ಧಿಸುವುದು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ, ಚೀನಾದ ಆಟಿಕೆಗಳು ಭಾರತದ ಮಾರುಕಟ್ಟೆಗೆ ಡಂಪ್ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಅಮೆರಿಕದ ಸುಂಕನೀತಿಯಿಂದ ಉಂಟಾಗಿರುವ ಅನಿಶ್ಚಿತತೆ ಹೆಚ್ಚು ಕಾಲ ಇರುವುದಿಲ್ಲ. ಕೆಲವೇ ತಿಂಗಳುಗಳಲ್ಲಿ ಈ ಸಮಸ್ಯೆ ಪರಿಹಾರ ಕಾಣಲಿದೆ.
| ಕೆ. ಕೃತಿವಾಸನ್ ಮುಖ್ಯ ಕಾರ್ಯನಿರ್ವಾಹಕ ಮತ್ತು ವ್ಯವಸ್ಥಾಪಕ ನಿರ್ದೇಶಕ, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ವಿವಿಧ ದೇಶಗಳ ಮೇಲೆ ಅಮೆರಿಕ ಹೇರಿದ ಪರಸ್ಪರ ತೆರಿಗೆಗಳಿಂದ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಗೊಂದಲದ ಸನ್ನಿವೇಶದಿಂದ ದೀರ್ಘಾವಧಿ ಯೋಜನೆಗಳ ಮೇಲೆ ಪರಿಣಾಮವಾಗುವುದಿಲ್ಲ. ಈ ಸಮಸ್ಯೆ ತಾತ್ಕಾಲಿಕವಾದದ್ದು. | ಪೀಟರ್ ಎಲ್ಬರ್ಸ್ ಮುಖ್ಯ ಕಾರ್ಯ ನಿರ್ವಾಹಕ, ಇಂಡಿಗೋ ವಿಮಾನಯಾನ ಸಂಸ್ಥೆ
ಅಮೆರಿಕದ ತೆರಿಗೆ ನೀತಿಯು ಜಾಗತಿಕ ವ್ಯಾಪಾರ ವಲಯದ ಆತ್ಮವಿಶ್ವಾಸ ಮತ್ತು ಗ್ರಾಹಕರ ಭಾವನೆಗಳನ್ನು ಕುಗ್ಗಿಸುತ್ತದೆ. ಏಷ್ಯಾ ಖಂಡದ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮೂಡೀಸ್ ರೇಟಿಂಗ್ಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ನಿಕ್ಕಿ ಡಾಂಗ್ ಭಾನುವಾರ ತಿಳಿಸಿದ್ದಾರೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಮೇಲೆ ಹೇರಿದ್ದ ಪರಸ್ಪರ ತೆರಿಗೆಗಳ ಜಾರಿಗೆ 90 ದಿನಗಳ ತಡೆ ನೀಡಿದ್ದರೂ, ಎಲ್ಲ ವಸ್ತುಗಳ ಮೇಲೆ ಶೇ. 10ರಷ್ಟು ಮೂಲತೆರಿಗೆ ವಿಧಿಸಿರುವುದು ಮುಂದುವರಿಯುವ ಕಾರಣ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದು ಅವರು ವಿವರಿಸಿದ್ದಾರೆ.
ಭಾರತೀಯ ಷೇರು ಮಾರುಕಟ್ಟೆಗೆ ಸೋಮವಾರ ಡಾ. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ರಜೆ ಇದ್ದು, ಮಂಗಳವಾರದಿಂದ ಆರಂಭವಾಗುವ ವಹಿವಾಟಿನ ದಿಕ್ಕನ್ನು ಅಮೆರಿಕ-ಚೀನಾ ಸುಂಕ ಸಮರ ಮತ್ತು ಇನ್ಫೋಸಿಸ್, ವಿಪ್ರೋ ಮುಂತಾದ ಐಟಿ ಕಂಪನಿಗಳ ತ್ರೖೆಮಾಸಿಕ ಫಲಿತಾಂಶಗಳು ನಿರ್ಧರಿಸುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆ ಪ್ರವೃತ್ತಿ ಮತ್ತು ವಿದೇಶಿ ಹೂಡಿಕೆದಾರರ ವ್ಯಾಪಾರ ಚಟುವಟಿಕೆಗಳು ಕೂಡ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ ಎಂದು ತಜ್ಞರು ತಿಳಿಸಿದ್ದಾರೆ.
ಅಮೆರಿಕದ ಇತ್ತೀಚಿನ ತೆರಿಗೆ ನೀತಿಗಳಿಂದಾಗಿ ಜಾಗತಿಕ ವ್ಯಾಪಾರ ಶೇ. 3ರಷ್ಟು ಕುಗ್ಗಲಿದೆಯಲ್ಲದೆ ರಫ್ತು ಚಟುವಟಿಕೆಯು ಅಮೆರಿಕ ಮತ್ತು ಚೀನಾ ಮಾರುಕಟ್ಟೆಗಳಿಂದ ಭಾರತ, ಕೆನಡಾ, ಬ್ರೆಜಿಲ್ ಮಾರುಕಟ್ಟೆಗಳಿಗೆ ಸ್ಥಳಾಂತರವಾಗಲಿದೆ ಎಂದು ವಿಶ್ವಸಂಸ್ಥೆ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶದ ನಿರ್ದೇಶಕಿ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಪಮೇಲಾ ಕೋಕ್ ಹ್ಯಾಮಿಲ್ಟನ್ ಅಭಿಪ್ರಾಯಪಟ್ಟಿದ್ದಾರೆ.