ನ್ಯೂಸ್

ಟ್ರಂಪ್​ಗೆ​ ತಟ್ಟಿದ ಬಿಸಿ! H-1B ವೀಸಾ ಶುಲ್ಕಕ್ಕೆ ಬೀಳಬೇಕು ಬ್ರೇಕ್​; ಕೋರ್ಟ್​ ಮೆಟ್ಟಿಲೇರಿದ ವಾಣಿಜ್ಯ ಮಂಡಳಿ | Trump

ಅಮೆರಿಕ: ಎಚ್​-1B ವೀಸಾ ಅರ್ಜಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿರುವ ನೂತನ100,000 ಡಾಲರ್​ (ಅಂದರೆ 80 ಲಕ್ಷ ರೂ.) ಶುಲ್ಕವನ್ನು ಪ್ರಶ್ನಿಸಿ, ಯುಎಸ್ ಚೇಂಬರ್ ಆಫ್ ಕಾಮರ್ಸ್ ಇದೀಗ ಕೋರ್ಟ್​ ಮೆಟ್ಟಿಲೇರಿದೆ. ಇದು ಕಾನೂನುಬಾಹಿರ ಎಂದಿರುವ ವಾಣಿಜ್ಯ ಮಂಡಳಿ, ಟ್ರಂಪ್ (Trump) ನಿರ್ಧಾರವು ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ಅವಲಂಬಿಸಿರುವ ಅಮೇರಿಕನ್ ಕಂಪನಿಗಳಿಗೆ ದೊಡ್ಡ ಹಿನ್ನಡೆ ಎಂದು ತಿಳಿಸಿದೆ.

ಸೆ.19ರಂದು ಡೊನಾಲ್ಡ್ ಟ್ರಂಪ್ ಈ ಶುಲ್ಕವನ್ನು ವಿಧಿಸಿದ್ದು, ಅಮೆರಿಕದಲ್ಲಿ ವಿದೇಶಿ ಕಾರ್ಮಿಕರ ನೇಮಕಾತಿಯನ್ನು ಕಡಿತಗೊಳಿಸುವ ಮತ್ತು ಅಲ್ಲಿನ ನಾಗರಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಟ್ರಂಪ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದರು. ಇದಕ್ಕೆ ಆಕ್ಷೇಪ ಹೊರಹಾಕಿರುವ ಯುಎಸ್ ಚೇಂಬರ್ ಆಫ್ ಕಾಮರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೀಲ್ ಬ್ರಾಡ್ಲಿ, ಹೊಸ ಶುಲ್ಕವು ಅಮೇರಿಕನ್ ಕಂಪನಿಗಳು, ವಿಶೇಷವಾಗಿ ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ H-1B ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ.

"ನೂತನ 100,000 ಡಾಲರ್​ ವೀಸಾ ಶುಲ್ಕವು ಸ್ಟಾರ್ಟ್‌ಅಪ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಭರಿಸಲಾಗದಂತಿದೆ. H-1B ಯೋಜನೆ ಅಮೇರಿಕನ್ ಕಂಪನಿಗಳಿಗೆ ವಿಶ್ವದ ಕೌಶಲ್ಯಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಬ್ರಾಡ್ಲಿ ಹೇಳಿದ್ದಾರೆ.

ಚೇಂಬರ್ ಅಭಿಪ್ರಾಯವೇನು?

ಯುಎಸ್ ಚೇಂಬರ್ ಆಫ್ ಕಾಮರ್ಸ್ ತನ್ನ ಅರ್ಜಿಯಲ್ಲಿ ಶುಲ್ಕವು ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಇದು ವೀಸಾ ಶುಲ್ಕವನ್ನು ಸರ್ಕಾರಿ ಆಡಳಿತಾತ್ಮಕ ವೆಚ್ಚಗಳನ್ನು ಪ್ರತಿಬಿಂಬಿಸಲು ಮತ್ತು ಆದಾಯದ ಮೂಲವಾಗಿ ಬಳಸಬಾರದು ಎಂದು ಒತ್ತಾಯಿಸಿದೆ.

"ಈ ಕ್ರಮವು ನಾವೀನ್ಯತೆಗೆ ಅಡ್ಡಿಯಾಗಿದೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ವಿಜ್ಞಾನ ವಲಯಗಳಲ್ಲಿ ನುರಿತ ಕೆಲಸಗಾರರ ಕೊರತೆಯ ಹಿನ್ನೆಲೆಯಲ್ಲಿ. ಆರ್ಥಿಕ ಬೆಳವಣಿಗೆ ಮುಂದುವರಿಯಲು ಕಾರ್ಮಿಕರ ಸಂಖ್ಯೆ ಕಡಿಮೆಯಾಗಬಾರದು, ಹೆಚ್ಚಾಗಬೇಕು. ಮತ್ತು ನುರಿತ ಕೆಲಸಗಾರರಿಗೆ ವೀಸಾ ಪ್ರಕ್ರಿಯೆಯನ್ನು ಸುಧಾರಿಸಲು ಸಾಮಾನ್ಯ ಸುಧಾರಣೆಗಳನ್ನು ಜಾರಿಗೆ ತರಲು ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡುವುದು ಸೂಕ್ತ" ಎಂದು ಬ್ರಾಡ್ಲಿ ಹೇಳಿದರು.

ಯುಎಸ್ ಚೇಂಬರ್ ಆಫ್ ಕಾಮರ್ಸ್ ಈ ಹಿಂದೆ ಸರ್ಕಾರಗಳ ವಲಸೆ ಮತ್ತು ಕಾರ್ಮಿಕ ನೀತಿಗಳ ವಿರುದ್ಧ ಹಲವಾರು ಮೊಕದ್ದಮೆಗಳನ್ನು ಹೂಡಿದೆ. ಟ್ರಂಪ್ ಮೊದಲ ಅವಧಿಯಲ್ಲಿ H-1B ವೀಸಾಗಳ ಮೇಲಿನ ನಿರ್ಬಂಧಗಳನ್ನು ಯಶಸ್ವಿಯಾಗಿ ಪ್ರಶ್ನಿಸಿತು. 2017ರಿಂದ, ಅಮೆರಿಕದ ವ್ಯವಹಾರಗಳ ಸ್ಪರ್ಧಾತ್ಮಕತೆಗೆ ಹಾನಿ ಮಾಡುವ ಸರ್ಕಾರಿ ಕ್ರಮಗಳ ವಿರುದ್ಧ ಇಲ್ಲಿಯವರೆಗೆ 25 ಮೊಕದ್ದಮೆಗಳನ್ನು ವಾಣಿಜ್ಯ ಮಂಡಳಿ ಹೂಡಿದೆ,(ಏಜೆನ್ಸೀಸ್).