ನ್ಯೂಸ್

ಕರೊನಾ ವೈರಸ್ ವಿಚಾರಕ್ಕೆ ರಷ್ಯಾ, ಚೀನಾ ಮತ್ತು ಇರಾನ್​ ವಿರುದ್ಧ ಕಿಡಿಕಾರಿದ ಅಮೆರಿಕ; ಸುಳ್ಳುಸುದ್ದಿ ಹಬ್ಬಿಸುವ ಅಭಿಯಾನದಲ್ಲಿ ತೊಡಗಿವೆಯೆಂಬ ಆರೋಪ

ವಾಷಿಂಗ್ಟನ್​: ಕರೊನಾ ವೈರಸ್​ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ಆರೋಪ-ಪ್ರತ್ಯಾರೋಪ ಮಾಡಿಕೊಂಡಿವೆ. ಕರೊನಾ ಹರಡಿದ್ದು ಅಮೆರಿಕದಿಂದ, ಯುಎಸ್​ ಸೇನೆಯೇ ವೈರಸ್​ನ್ನು ತಂದು ಚೀನಾದಲ್ಲಿ ಹಾಕಿದೆ ಎಂದು ಚೀನಾ ಸರ್ಕಾರ ಹೇಳಿತ್ತು. ಅದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ತೀವ್ರ ತಿರುಗೇಟು ನೀಡಿತ್ತು.

ಇದೀಗ ಅಮೆರಿಕ ವಿದೇಶಾಂಗ ಖಾತೆಯ ಕಾರ್ಯದರ್ಶಿ ಮೈಕ್​ ಪೊಂಪಿಯೊ ಅವರು ಕರೊನಾ ವಿಚಾರವಾಗಿ ರಷ್ಯಾ, ಚೀನಾ ಮತ್ತು ಇರಾನ್​ ದೇಶ್​ಗಳನ್ನು ದೂಷಿಸಿದ್ದಾರೆ.

ಕರೊನಾ ವೈರಸ್​ ಜಾಗತಿಕ ಸಾಂಕ್ರಾಮಿಕ ರೋಗವಾಗಿದೆ. ಇದರ ಗಂಭೀರತೆಯನ್ನು ಅರಿಯದೆ ಚೀನಾ, ರಷ್ಯಾ ಮತ್ತು ಇರಾನ್​ಗಳು ಕಾಯಿಲೆಯ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿವೆ. ಅಲ್ಲದೆ, ಕರೊನಾ ನಿಯಂತ್ರಣಕ್ಕೆ ಗಂಭೀರವಾಗಿ ಪ್ರಯತ್ನ ಮಾಡುತ್ತಿರುವ ಅಮೆರಿಕಕ್ಕೆ ಕೆಟ್ಟ ಹೆಸರು ತರಲು ಸಂಘಟಿತವಾಗಿವೆ ಎಂದು ಮೈಕ್​ ಆರೋಪ ಮಾಡಿದ್ದಾರೆ.

ವೈಟ್ ಹೌಸ್​ನಲ್ಲಿ ಮಾತನಾಡಿದ ಅವರು, ಕರೊನಾ ವೈರಸ್ ಕುರಿತಂತೆ ಟ್ವಿಟರ್​ ಸೇರಿ ಜಗತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಮಾಹಿತಿಗಳು ಹರಡುತ್ತಿವೆ. ಟ್ವಿಟರ್​ನಲ್ಲಿ ಕೆಲವು ವ್ಯಕ್ತಿಗಳು ಇಲ್ಲಸಲ್ಲದ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಹಾಗೇ ರಷ್ಯಾ, ಚೀನಾ ಮತ್ತು ಇರಾನ್​ ದೇಶಗಳು ಕರೊನಾ ವಿರುದ್ಧ ಹೋರಾಡುತ್ತಿರುವ ಅಮೆರಿಕದ ಪ್ರಯತ್ನಗಳನ್ನು ಅವಮಾನಿಸುವ ಕೆಲಸ ಮಾಡುತ್ತಿದೆ. ಎಲ್ಲವನ್ನೂ ನಂಬಬೇಡಿ. ನಂಬಲರ್ಹ ಮೂಲಗಳಿಂದ ಹೊರಬೀಳುವ ವಿಷಯಗಳ ಬಗ್ಗೆ ಮಾತ್ರ ಗಮನವಿರಲಿ ಎಂದು ಅಮೆರಿಕದ ನಾಗರಿಕರಿಗೆ ಕಿವಿಮಾತು ಹೇಳಿದ್ದಾರೆ. ಅದರಲ್ಲೂ ರಷ್ಯಾ, ಚೀನಾ ಮತ್ತು ಇರಾನ್​ಗಳಂತೂ ತಪ್ಪು ಮಾಹಿತಿ ಪ್ರಸರಣದ ಅಭಿಯಾನವನ್ನೇ ಶುರುಮಾಡಿವೆ ಎಂದು ದೂಷಿಸಿದ್ದಾರೆ.

ಕರೊನಾ ವಿರುದ್ಧದ ಹೋರಾಟ ಒಂದು ಸವಾಲು ಎಂದು ಹೇಳಿರುವ ಮೈಕ್​, ಯಾರೂ ಹೆದರಬೇಡಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನೇತೃತ್ವದಲ್ಲಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್​)