airstrike  
ನ್ಯೂಸ್

ಇರಾನ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್! ಕದನ ವಿರಾಮಕ್ಕೆ ಮತ್ತೆ ಶಾಕ್

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ವಾಣಿಜ್ಯ ಸರಕು ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಆರೋಪದ ಬೆನ್ನಲ್ಲೇ ಅಮೆರಿಕ ಶುಕ್ರವಾರ ಪ್ರತಿದಾಳಿ(airstrike) ನಡೆಸಿದೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ಸಂಗ್ರಹ ಕೇಂದ್ರಗಳು ಮತ್ತು ಕರಾವಳಿ ರಾಡಾರ್ ತಾಣಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ದಾಳಿ ನಡೆಸಿದೆ. ಈ ಘಟನೆ ಇತ್ತೀಚೆಗೆ ಜಾರಿಯಾಗಿದ್ದ ಕದನ ವಿರಾಮದ ಭವಿಷ್ಯದ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.

ವಾಣಿಜ್ಯ ಹಡಗಿನ ಮೇಲಿನ ದಾಳಿಗೆ ಪ್ರತಿಕ್ರಿಯೆ

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿದ ಮಾಹಿತಿ ಪ್ರಕಾರ, ವಾಣಿಜ್ಯ ಹಡಗುಗಳ ವಿರುದ್ಧ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಸರಕು ಹಡಗಿನ ಮೇಲೆ ನಡೆದ ದಾಳಿ ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಆರೋಪಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ದಾಳಿಯನ್ನು ಖಂಡಿಸಿದ್ದು, "ಇದು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ಮೂರ್ಖತನದ ಕ್ರಮ" ಎಂದು ಹೇಳಿದ್ದಾರೆ.
ಇದರ ನಡುವೆ, ದಕ್ಷಿಣ ಇರಾನ್‌ನ ಸಿರಿಕ್ ಸಮೀಪದ ತಹೆರೂಯೆಹ್ ಬಂದರು ಪ್ರದೇಶದಲ್ಲಿ ಸ್ಫೋಟದ ಸದ್ದು ಕೇಳಿಸಿಕೊಂಡಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಕ್ಷಿಪಣಿ ಬಿದ್ದ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಆತಂಕ

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಈಗಾಗಲೇ ತನ್ನ ಅನುಮತಿ ಪಡೆಯುವಂತೆ ಎಚ್ಚರಿಕೆ ನೀಡಿದೆ. ಆದರೂ ಹಲವು ಹಡಗುಗಳು ಸಂಚಾರ ಮುಂದುವರಿಸಿವೆ. ಕೆಲವು ಹಡಗುಗಳು ಇರಾನ್ ಅನುಮೋದಿಸದ ಓಮನ್ ಕರಾವಳಿ ಮಾರ್ಗವನ್ನು ಬಳಸಿವೆ ಎಂದು ವರದಿಯಾಗಿದೆ. ಈ ವಿವಾದದಿಂದ ಸಿಲುಕಿದ್ದ 115 ಹಡಗುಗಳು ಹಾಗೂ ಸುಮಾರು 2,500 ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ವಿಶ್ವಸಂಸ್ಥೆಯ ಸಮುದ್ರ ಸಂಸ್ಥೆ ನಡೆಸುತ್ತಿತ್ತು. ಆದರೆ ಇತ್ತೀಚಿನ ದಾಳಿಯ ಬಳಿಕ ಆ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ನಡುವೆಯೇ ಜಾಗತಿಕ ತೈಲ ಬೆಲೆಗಳು ಇಳಿಕೆಯಾಗಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಾಟ ಮುಂದುವರಿಯುವ ವಿಶ್ವಾಸ ಮಾರುಕಟ್ಟೆಯಲ್ಲಿ ವ್ಯಕ್ತವಾಗಿದೆ.

ಲೆಬನಾನ್ ಶಾಂತಿ ಒಪ್ಪಂದಕ್ಕೆ ಹೊಸ ಚೌಕಟ್ಟು

ಇದಕ್ಕೂ ಮಧ್ಯೆ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ಹೊಸ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಈ ಒಪ್ಪಂದವು ದೀರ್ಘಕಾಲದ ಶಾಂತಿ ಮತ್ತು ಭದ್ರತೆಗೆ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಒಪ್ಪಂದವನ್ನು ಇರಾನ್ ವಿರುದ್ಧದ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದ್ದಾರೆ. ದಕ್ಷಿಣ ಲೆಬನಾನ್‌ನ ಕೆಲವು ಪ್ರದೇಶಗಳಿಗೆ ಲೆಬನಾನ್ ಸೇನೆ ಮರಳಲು ಅವಕಾಶ ನೀಡಲಾಗುವುದು. ಆದರೆ ಹೆಜ್ಬೊಲ್ಲಾ ಸಂಪೂರ್ಣವಾಗಿ ನಿಶ್ಶಸ್ತ್ರೀಕರಣಗೊಳ್ಳುವವರೆಗೂ ಇಸ್ರೇಲ್ ತನ್ನ ಭದ್ರತಾ ವಲಯದಲ್ಲಿ ಸೇನೆಯನ್ನು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹೆಜ್ಬೊಲ್ಲಾ, ಈ ಒಪ್ಪಂದವು ಅಮೆರಿಕ-ಇರಾನ್ ಕದನ ವಿರಾಮದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದೆ.

ಅಣು ಕಾರ್ಯಕ್ರಮದ ಮೇಲೂ ನಿಗಾ ಅಗತ್ಯ

ಇದೇ ವೇಳೆ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಮುಖ್ಯಸ್ಥ ರಫೇಲ್ ಗ್ರೋಸಿ, ಅಮೆರಿಕ-ಇರಾನ್ ನಡುವಿನ ಯಾವುದೇ ಅಂತಿಮ ಒಪ್ಪಂದದಲ್ಲಿ ಬಲಿಷ್ಠ ಪರಿಶೀಲನಾ ವ್ಯವಸ್ಥೆ ಇರಲೇಬೇಕು ಎಂದು ಹೇಳಿದ್ದಾರೆ. ಇರಾನ್ ಅಣ್ವಸ್ತ್ರ ನಿರ್ಮಾಣದ ಉದ್ದೇಶ ಇಲ್ಲ ಎಂದು ಹೇಳಿದ್ದರೂ, ಅದರ ಮಾತಿಗಿಂತ ಅಂತರರಾಷ್ಟ್ರೀಯ ಮಟ್ಟದ ಕಟ್ಟುನಿಟ್ಟಿನ ಪರಿಶೀಲನೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧಕ್ಕೂ ಮುನ್ನ ಇರಾನ್ ಬಳಿ ಸುಮಾರು 440 ಕಿಲೋಗ್ರಾಂಗಳಷ್ಟು ಶೇ.60ರಷ್ಟು ಸಮೃದ್ಧೀಕರಿಸಿದ ಯುರೇನಿಯಂ ಸಂಗ್ರಹವಿತ್ತು. ಅದನ್ನು IAEA ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಮಟ್ಟಕ್ಕೆ ಇಳಿಸುವ ಪ್ರಕ್ರಿಯೆ ಒಪ್ಪಂದದಲ್ಲಿದೆ,(ಏಜೆನ್ಸೀಸ್​​).