ಬೆಂಗಳೂರು: ಅಹಮದಾಬಾದ್ ಸಬರಮತಿ ದಂಡೆಯಲ್ಲಿ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಮಾದರಿಯಲ್ಲಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ತನ್ನ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ಶುಕ್ರವಾರ ಮುಂದಿಟ್ಟಿತು. ಇದರೊಟ್ಟಿಗೆ ಐಟಿ-ಬಿಟಿ ವಿಭಾಗದ ಅನೇಕ ಯೋಜನೆಗಳ ತ್ವರಿತ ಅನುಮತಿ ನೀಡುವಂತೆಯೂ ಒತ್ತಾಯ ಮಾಡಿತು.
ನೂತನವಾಗಿ ರಚನೆಗೊಂಡ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಇಲಾಖೆಗೆ ಸಂಬಂಧಿಸಿದ ಪ್ರಸ್ತವಾನೆಯನ್ನು ಮುಂದಿಟ್ಟರು.
ಕರ್ನಾಟಕ ರಾಜ್ಯವು ಐಟಿ, ಬಿಟಿ, ಏರೋಸ್ಪೇಸ್, ಆಟೋಮೋಟಿವ್, ಜವಳಿ ಮತ್ತು ಭಾರೀ ಕೈಗಾರಿಕಾ ಕ್ಷೇತ್ರದಲ್ಲಿ ಆರ್ಥಿಕವಾಗಿ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಕರ್ನಾಟಕವು ಈ ಕ್ಷೇತ್ರಗಳ ಅಭಿವೃದ್ಧಿಗೆ ಸೂಕ್ತ ಸ್ಥಳವಾಗಿದ್ದು, ಹೂಡಿಕೆಗೆ ಅಗಾಧ ಅವಕಾಶವಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಉಲ್ಲೇಖಿಸಿದರು.
ಟೆಕ್ ಹಬ್ ಮತ್ತು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬೆಂಗಳೂರು ಗುರುತಿಸಿಕೊಂಡಿದೆ, ಬೆಂಗಳೂರು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಡೊಮೇನ್, ಫಿನ್ಟೆಕ್ ಸ್ಪೇಸ್, ಎಂಟರ್ಪ್ರೈಸ್ ಟೆಕ್, ಇ-ಕಾಮರ್ಸ್ ಮತ್ತು ಎಡ್-ಟೆಕ್ ಕ್ಷೇತ್ರಗಳಲ್ಲಿ ತೆರೆದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಮಾದರಿಯಲ್ಲಿ ಅವಕಾಶ ತೆರೆದಿಡುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ, ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿಗೆ ಅವಕಾಶ ಲಭ್ಯವಾಗಲಿದೆ, ಜತೆಗೆ ಯತೇಚ್ಚವಾಗಿ ವಿದೇಶಿ ಹೂಡಿಕೆಗಳನ್ನೂ ಆಕರ್ಷಿಸಬಹುದು ಎಂದು ವಿವರಿಸಿದರು.
4.5 ಶತಕೋಟಿ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ರಫ್ತುಗಳೊಂದಿಗೆ ರಾಜ್ಯವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ, ಶೇ.46ರಷ್ಟು ರಾಷ್ಟ್ರೀಯ ಪಾಲನ್ನು ಹೊಂದಿದ್ದು, ಭಾರತದ ಕೈಗಾರಿಕಾ ಉತ್ಪಾದನೆಗೆ ಶೇ.10ರಷ್ಟು ಕೊಡುಗೆ ನೀಡುತ್ತಿದೆ ಎಂದು ಸಚಿವರು ಹೇಳಿದರು.
ಐಟಿ ಬಿಟಿ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು, ಉದ್ಯಮ-ನಿರ್ದಿಷ್ಟ ಕೌಶಲ್ಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಕೌಶಲ್ಯದ ಅವಶ್ಯಕತೆ ಮತ್ತು ರಾಜ್ಯದಲ್ಲಿ ಸಂಶೋಧನೆ ಮತ್ತು ನಡುವಿನ ಅಂತರವನ್ನು ಕಡಿಮೆ ಮಾಡುವುದು ಸೇರಿದಂತೆ ಇಲಾಖೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನದ ಬೆಂಬಲ ನೀಡುವಂತೆ ಕೋರಿದರು.