ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ಇತ್ತೀಚೆಗೆ ಹಿಪಪಾಟಮಸ್ ದಾಳಿಗೆ ಪಶುವೈದ್ಯಕೀಯ ಸಿಬ್ಬಂದಿ ಸಮೀಕ್ಷಾ ರೆಡ್ಡಿ ಅವರು ಬಲಿಯಾದ ಘಟನೆಯ ಬೆನ್ನಲ್ಲೇ, ಮೃಗಾಲಯದ ಸಿಬ್ಬಂದಿಗಳ ಸುರಕ್ಷತೆಯ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. 
ನ್ಯೂಸ್

ಮೃಗಾಲಯ ಸಿಬ್ಬಂದಿ ಸುರಕ್ಷತೆಗೆ ರಾಷ್ಟ್ರೀಯ ನೀತಿ ರೂಪಿಸಲು ಒತ್ತಾಯ: ಸಿ.ಜೆ.ಎ ಗೆ ಮನವಿ

ಮಂಗಳೂರು: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ಇತ್ತೀಚೆಗೆ ಹಿಪಪಾಟಮಸ್ ದಾಳಿಗೆ ಪಶುವೈದ್ಯಕೀಯ ಸಿಬ್ಬಂದಿ ಸಮೀಕ್ಷಾ ರೆಡ್ಡಿ ಅವರು ಬಲಿಯಾದ ಘಟನೆಯ ಬೆನ್ನಲ್ಲೇ, ಮೃಗಾಲಯದ ಸಿಬ್ಬಂದಿಗಳ ಸುರಕ್ಷತೆಯ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ದೇಶದಾದ್ಯಂತ ಮೃಗಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ರಕ್ಷಣೆಗೆ ಯಾವುದೇ ನಿರ್ದಿಷ್ಟ ಸುರಕ್ಷತಾ ಪ್ರೋಟೋಕಾಲ್ ಇಲ್ಲದಿರುವುದನ್ನು ಖಂಡಿಸಿ, ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ವಿಸ್ತೃತ ಮನವಿ ಸಲ್ಲಿಕೆಯಾಗಿದೆ.
ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ರಾತ್ರಿಯ ವೇಳೆ ಗಾಯಗೊಂಡ ಹಿಪಪಾಟಮಸ್‌ಗೆ ಚಿಕಿತ್ಸೆ ನೀಡಲು ಹೋದಾಗ ನಡೆದ ದುರಂತವು ಮೃಗಾಲಯಗಳ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪರಿಸರ ಕಾರ್ಯಕರ್ತ ಭುವನ್ ಮಂಗಳೂರು ಅವರು, ಕೇಂದ್ರ ಮೃಗಾಲಯ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿ, ತುರ್ತು ಸುಧಾರಣೆಗಳಿಗೆ ಆಗ್ರಹಿಸಿದ್ದಾರೆ.

*ಸುರಕ್ಷತಾ ನೀತಿಯ ತುರ್ತು ಅಗತ್ಯ

ಭಾರತದಾದ್ಯಂತ ವನ್ಯಜೀವಿಗಳ ನಿರ್ವಹಣೆಯಲ್ಲಿ ತೊಡಗಿರುವ ಪಶುವೈದ್ಯರು, ಪ್ರಾಣಿ ಪಾಲಕರು, ರಕ್ಷಣಾ ತಂಡಗಳು ಮತ್ತು ಮುಂಚೂಣಿಯ ಸಿಬ್ಬಂದಿಗಳು ಪ್ರತಿದಿನ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಯಾವುದೇ ಕಡ್ಡಾಯ ಸುರಕ್ಷತಾ ಮಾರ್ಗಸೂಚಿಗಳು ಲಭ್ಯವಿಲ್ಲ ಎಂಬುದು ಆತಂಕಕಾರಿ ವಿಷಯ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಮೃಗಾಲಯಗಳಿಗೆ ಅನ್ವಯವಾಗುವಂತೆ ಏಕರೂಪದ ಸಮಗ್ರ ಸುರಕ್ಷತಾ ನೀತಿಯನ್ನು ಜಾರಿಗೊಳಿಸಬೇಕು.ವನ್ಯಜೀವಿಗಳ ದಾಳಿಯ ಸಂದರ್ಭದಲ್ಲಿ ತಕ್ಷಣದ ನೆರವು ನೀಡಲು ಸುಸಜ್ಜಿತ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಮ್ ಅಳವಡಿಸಬೇಕು. ಪ್ರಾಣಿಗಳ ನಿರ್ವಹಣೆ ಮತ್ತು ಚಿಕಿತ್ಸೆಯ ಸಮಯದಲ್ಲಿ ಸಿಬ್ಬಂದಿಗೆ ಗುಣಮಟ್ಟದ ರಕ್ಷಣಾತ್ಮಕ ಕವಚಗಳು ಮತ್ತು ಉಪಕರಣಗಳನ್ನು ಒದಗಿಸಬೇಕು. ಸಿಬ್ಬಂದಿಗೆ ನಿಯಮಿತವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವುದರ ಜೊತೆಗೆ, ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವ ಅವರ ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಮೃಗಾಲಯದ ಸಿಬ್ಬಂದಿಗೆ ಹೆಚ್ಚಿನ ಮೊತ್ತದ ಜೀವ ವಿಮೆ ಸೌಲಭ್ಯ ಒದಗಿಸಬೇಕು ಮತ್ತು ಭದ್ರತಾ ಲೋಪಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ವಿಸ್ತೃತ ಮನವಿ ಸಲ್ಲಿಸಿದ್ದಾರೆ.
ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಈಗಾಗಲೇ ಅನೇಕ ದಕ್ಷ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಮೃಗಾಲಯ ಪ್ರಾಧಿಕಾರಗಳು ಈ ಮನವಿಗೆ ಸ್ಪಂದಿಸಿ, ಮೃಗಾಲಯಗಳನ್ನು ಸಿಬ್ಬಂದಿ ಸ್ನೇಹಿಯನ್ನಾಗಿ ಪರಿವರ್ತಿಸಬೇಕೆಂಬ ಒತ್ತಾಯ ಕೇಳಿಬಂದಿದೆ.