ಬೆಂಗಳೂರು: ಯಾದಗಿರಿ ಶಾಸಕರ ಭ್ರಷ್ಟಾಚಾರಕ್ಕೆ ಬಲಿಯಾದ ದಕ್ಷ, ನಿಷ್ಠಾವಂತ ದಲಿತ ಪೊಲೀಸ್ ಅಧಿಕಾರಿ ದಿ. ಪರಶುರಾಮ್ ಪಿಎಸ್ಐ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ ಕುಟುಂಬ ನಿರ್ವಹಣೆಗೆ ನನ್ನ ಒಂದು ತಿಂಗಳ ಸಂಬಳ 60 ಸಾವಿರ ರೂ ನೀಡಿದ್ದೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸದರಿ ಪ್ರಕರಣವನ್ನು ತಿರುಚದೆ ಹಾಗೂ ಆರೋಪಿಗಳ ರಕ್ಷಣೆಯನ್ನು ಮಾಡದೆ ರಾಜ್ಯ ಸರ್ಕಾರವು ಪರಶುರಾಮ್ ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ನ್ಯಾಯ ಸಿಗುವವರೆಗೂ, ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲವಿಲ್ಲದಂತಾಗಿದೆ. ಕೂಡಲೇ ತಪ್ಪಿತಸ್ಧ ಶಾಸಕರ ರಾಜೀನಾಮೆ ಪಡೆಯಬೇಕು. ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.