ನ್ಯೂಸ್

ತ್ರಿಶಂಕು ಸ್ಥಿತಿಯಲ್ಲಿ ಕೃಷ್ಣಾ ಮೇಲ್ದಂಡೆ

| ಅಶೋಕ ಶೆಟ್ಟರ, ಬಾಗಲಕೋಟೆ

‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎನ್ನುವ ಮಾತು ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಮುಳುಗಡೆ ಸಂತ್ರಸ್ತರು ಹಾಗೂ ನೀರಾವರಿ ಸೌಲಭ್ಯ ಪಡೆಯುವ ಫಲಾನುಭವಿ ರೈತರಿಗೆ ಅನ್ವಯ ಆಗುವಂತಿದೆ. ಕೃಷ್ಣಾ ನ್ಯಾಯಮಂಡಳಿ ತೀರ್ಪು ಬಂದು ಒಂದೂವರೆ ದಶಕ ಸಮೀಪಿಸಿದ್ದರೂ ಇದುವರೆಗೆ ರಾಜ್ಯಕ್ಕೆ ತನ್ನ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು ಈಗ ಇರುವ 519.6 ಮೀಟರ್​ನಿಂದ 524.256 ಮೀಟರ್​ಗೆ ಹೆಚ್ಚಿಸುವ ಕಡೆಗೆ ರಾಜ್ಯ ಸರ್ಕಾರ ಗಮನ ಕೊಟ್ಟಿಲ್ಲ. ಇದರಿಂದಾಗಿ ಕೃಷ್ಣಾ ಯೋಜನೆಯ ಮುಳುಗಡೆ ಆಗುವ ಜಮೀನುಗಳ ರೈತರ ಬದುಕು ಡೋಲಾಯಮಾನವಾಗಿದೆ. ರೈತರ ಜಮೀನುಗಳ ಪಹಣಿಯಲ್ಲಿ ‘ಕೃಷ್ಣಾ ಮೇಲ್ದಂಡೆ ಯೋಜನೆ’ ಎಂದು ನಮೂದಿಸಿ ದಶಕ ಕಳೆದಿದೆ. ಹೀಗಾಗಿ ರೈತರಿಗೆ ಯಾವುದೇ ಸಾಲ ಸೌಲಭ್ಯ ಸಿಗುತ್ತಿಲ್ಲ. ಆಸ್ತಿಯನ್ನು ಖರೀದಿ, ಮಾರಾಟ ಮಾಡಲೂ ಆಗುತ್ತಿಲ್ಲ. ತಮ್ಮ ಜಮೀನು ಅಭಿವೃದ್ಧಿಪಡಿಸಲೂ ಅವಕಾಶ ಇಲ್ಲದೇ ರೈತರು ಸಂಕಟ ಅನುಭವಿಸುತ್ತಿದ್ದಾರೆ.

ಈವರೆಗೆ ಆಗಿದ್ದೇನು? ಆಗಬೇಕಿರುವುದೇನು?

1964ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆರು ದಶಕ ಕಳೆದರೂ ಯೋಜನೆ ಪೂರ್ಣವಾಗಿಲ್ಲ ಎನ್ನುವುದೇ ಉತ್ತರ ಕರ್ನಾಟಕದ ದೊಡ್ಡ ದುರಂತ. ಆಲಮಟ್ಟಿ ಜಲಾಶಯವನ್ನು 519.6 ಮೀಟರ್​ಗೆ ಎತ್ತರಿಸಿ ನೀರು ನಿಲ್ಲಿಸಿದ್ದು 2002ರಲ್ಲಿ. ಇದಕ್ಕೆ ತೆಗೆದುಕೊಂಡ ಸಮಯ ಭರ್ತಿ 38 ವರ್ಷ. ಇದೀಗ 3ನೇ ಹಂತದಲ್ಲಿ ಜಲಾಶಯವನ್ನು 524.256 ಮೀಟರ್​ಗೆ ಎತ್ತರಿಸಬೇಕು. ಆಗ ಜಲಾಶಯದಲ್ಲಿ ಈಗ ಇರುವ 123 ಟಿಎಂಸಿ ನೀರು ಸಂಗ್ರಹದ ಜೊತೆಗೆ ಇನ್ನೂ 130 ಟಿಎಂಸಿ ಹೆಚ್ಚಿಗೆ ನೀರು ಸಂಗ್ರಹ ಸಾಮರ್ಥ್ಯ ಆಗಿ ಒಟ್ಟು 253 ಟಿಎಂಸಿ ನೀರು ಹಿಡಿದಿಡಬಹುದು. ಇದು ಆಗುವ ಮೊದಲು ಮುಳುಗಡೆ ಆಗುವ ಜಮೀನುಗಳ ಸ್ವಾಧೀನ ಹಾಗೂ ಮುಳುಗುವ 20 ಗ್ರಾಮಗಳಿಗೆ ಪುನರ್ವಸತಿ- ಪುನರ್ನಿರ್ವಣ, ಸಿವಿಲ್ ಕಾಮಗಾರಿಗಳು ಆಗಬೇಕು.

3ನೇ ಹಂತದ ಯೋಜನೆಗೆ ಎಲ್ಲವೂ ಸೇರಿ ಒಟ್ಟು 1,33,867 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು. ಆದರೆ, ಕಳೆದ ಒಂದು ದಶಕದಲ್ಲಿ ಆಗಿರುವುದು 28,903 ಎಕರೆ ಮಾತ್ರ. ಇನ್ನೂ 1.05 ಲಕ್ಷ ಎಕರೆ ಸ್ವಾಧೀನಪಡಿಸಿಕೊಳ್ಳಬೇಕು. ಸಂಪೂರ್ಣ ಮುಳುಗಡೆ ಆಗುವ 75 ಸಾವಿರ ಎಕರೆ ಜಮೀನಿನಲ್ಲಿ ಸದ್ಯ 2543 ಎಕರೆ ಮಾತ್ರ ಸ್ವಾಧೀನ ಆಗಿದೆ. ಆರ್.ಸಿ.ಗಳಿಗೆ 3,393 ಎಕರೆ ಹಾಗೂ ಕಾಲುವೆಗಾಗಿ 22,967 ಎಕರೆ ವಶಪಡಿಸಿಕೊಂಡಿದ್ದಾರೆ. ಇದು ಸರ್ಕಾರಿ ಯಂತ್ರದ ಆಮೆಗತಿಗೆ ಸಾಕ್ಷಿ. ಈ ವಿಳಂಬ ನೀತಿಗೆ ಬರೀ ಒಂದು ಪಕ್ಷದ ಸರ್ಕಾರವನ್ನು ಹೊಣೆ ಮಾಡಲು ಆಗುವುದಿಲ್ಲ. ಎಲ್ಲ ಪಕ್ಷಗಳ ನಿರ್ಲಕ್ಷ್ಯ ಸಮಪಾಲು ಇದರಲ್ಲಿದೆ. ಪರಿಣಾಮ ಯೋಜನಾ ವೆಚ್ಚ 17,200 ಕೋಟಿ ರೂ.ಗಳಿಂದ 1 ಲಕ್ಷ ಕೋಟಿ ರೂ. ತಲುಪಿ, ಇನ್ನೂ ಮುಂದೆ ಹೋಗುತ್ತಿದೆ.

ಹೋರಾಟದ ಕಿಚ್ಚಿನಲ್ಲಿ ಪ್ರತ್ಯೇಕತೆಯ ಕೂಗು...

ಚಳಿಗಾಲದ ಅಧಿವೇಶನ ಡಿ. 9ರಿಂದ ಬೆಳಗಾವಿಯಲ್ಲಿ ನಡೆಯಲಿದೆ. ಈಗ ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಡಿ. 3ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆದಿದೆ. ಹೋರಾಟ ದಿನೇದಿನೆ ತೀವ್ರಗೊಳ್ಳುತ್ತಿದೆ. ‘ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳು ಅನ್ಯಾಯ ಮಾಡುತ್ತಿವೆ’ ಎನ್ನುವ ಆಕ್ರೋಶ ಪ್ರತಿಧ್ವನಿಸತೊಡಗಿದೆ. ಇದು ವಿಧಾನಸೌಧಕ್ಕೆ ಕೇಳಿಸುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಮೊಳಗಲಾರಂಭಿಸಿದೆ. ಇದು ಮತ್ತಷ್ಟು ಗಟ್ಟಿಯಾಗುವ ಮೊದಲೇ ಸರ್ಕಾರ ಅನ್ಯಾಯ ಸರಿಪಡಿಸಲು ಮುಂದಾಗುತ್ತಾ ಅಥವಾ ಆರು ದಶಕ ಆಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಕ್ತಾಯವನ್ನು ಶತಮಾನೋತ್ಸವಕ್ಕೆ ಕೊಂಡೊಯ್ಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾಗಿ ಆರು ದಶಕಗಳು ಕಳೆದಿವೆ. 3ನೇ ಹಂತ ಇನ್ನೂ ಮುಗಿದಿಲ್ಲ. ನಾವು ರಾಜ್ಯದ ರೈತರ ಹಿತಕ್ಕಾಗಿ ಇಷ್ಟವಿಲ್ಲದಿದ್ದರೂ ನಮ್ಮ ಆಸ್ತಿಪಾಸ್ತಿ ಕಳೆದುಕೊಳ್ಳುತ್ತಿದ್ದೇವೆ. ನಮಗೊಂದು ಗೌರವ ಬೇಡವೆ? ಇನ್ನೆಷ್ಟು ದಿನ ನಾವು ಅತಂತ್ರದಲ್ಲಿ ಬದುಕುವುದು? ಜಮೀನು ಕೊಟ್ಟು ಪರಿಹಾರ ಪಡೆಯುವ ಉದ್ದೇಶ ನಮಗೇನಿಲ್ಲ. ಯೋಜನೆ ಯಾವಾಗ ಮುಗಿಸುತ್ತೀರಿ ಎಂದು ಸ್ಟಷ್ಟಪಡಿಸಿ, ಇಲ್ಲವೇ ಯೋಜನೆ ರದ್ದುಪಡಿಸಿ ಪಹಣಿಯಲ್ಲಿ ಯುಕೆಪಿ ಹೆಸರು ತೆಗೆದುಬಿಡಿ. | ಅದೃಶ್ಯಪ್ಪ ದೇಸಾಯಿ ಅಧ್ಯಕ್ಷರು, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿ
  • ಎರಡು ಹಂತದಲ್ಲಿ ಭೂಸ್ವಾಧೀನ
  • ಸರ್ಕಾರದ ಗೊಂದಲ
  • ಇನ್ನೂ 1.05 ಲಕ್ಷ ಎಕರೆ ಜಮೀನು ಸ್ವಾಧೀನ ಬಾಕಿ
  • ಒಂದು ಲಕ್ಷ ಕೋಟಿ ರೂ. ದಾಟಿದ ಯೋಜನಾ ವೆಚ್ಚ
  • ಯಾವ ಮುಖಂಡರ ಭರವಸೆ ಏನಿತ್ತು? ಏನಾಯಿತು...?

2013ರಲ್ಲಿ ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಡೆ ಪಾದಯಾತ್ರೆ ನಡೆಸಿತ್ತು. ಐದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ಹುಸಿಯಾಗಿತ್ತು. ಬಳಿಕ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ‘ಯೋಜನೆಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಲು ಆಗುವುದಿಲ್ಲ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು’ ಎಂದು ಹೇಳಿ ಕೈತೊಳೆದುಕೊಂಡಿದ್ದರು. ಬಳಿಕ ಯಡಿಯೂರಪ್ಪ ‘ಕೇಂದ್ರದ ಕೈ- ಕಾಲು ಹಿಡಿದು ವರ್ಷಕ್ಕೆ 20 ಸಾವಿರ ಕೋಟಿ ರೂ. ತಂದು ಯೋಜನೆ ಮುಗಿಸುತ್ತೇವೆ’ ಎಂದಿದ್ದರು. ಕರೊನಾ ಹಾವಳಿಯಲ್ಲಿ ಆ ಭರವಸೆ ಕೊಚ್ಚಿಕೊಂಡು ಹೋಯಿತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಹೇಳಿಕೊಳ್ಳುವಷ್ಟು ಅನುದಾನ ಬರಲಿಲ್ಲ. ಖುಷ್ಕಿ ಜಮೀನಿಗೆ ಎಕರೆಗೆ 20 ಲಕ್ಷ ಹಾಗೂ ನೀರಾವರಿಗೆ 24 ಲಕ್ಷ ರೂ. ಎಂದು ನಿರ್ಧರಿಸಿ ಪರಿಹಾರ ಕೊಡಲು ಆರಂಭಿಸುವಷ್ಟರಲ್ಲಿ ಸರ್ಕಾರದ ಅವಧಿ ಮುಗಿದಿತ್ತು. ಮತ್ತೆ ಚುನಾವಣೆ ಬಂದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಕೃಷ್ಣೆಯ ನೆನಪಾಯಿತು. ‘ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿಗೆ ವಾರ್ಷಿಕ 40 ಸಾವಿರ ಕೋಟಿ ರೂ.ಗಳಂತೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ. ಇದು ನಮ್ಮ 6ನೇ ಗ್ಯಾರಂಟಿ’ ಎಂದು ವಿಜಯಪುರದ ಸಮಾವೇಶದಲ್ಲಿ ಘೊಷಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ಸಿಎಂ ಆದ ಸಿದ್ದರಾಮಯ್ಯ ತಾವು ಹೇಳಿದಂತೆ ವರ್ಷಕ್ಕೆ 40 ಸಾವಿರ ಕೋಟಿಯಂತೆ ಎರಡು ಬಜೆಟ್​ಗಳಲ್ಲಿ 80 ಸಾವಿರ ಕೋಟಿ ರೂ. ಕೊಡಲಿಲ್ಲ. ಹೀಗಾಗಿ ಕೃಷ್ಣೆಯ ಕಣ್ಣೀರು ಹರಿಯುತ್ತಲೇ ಇದೆ.

ಆಂಧ್ರ ತಕರಾರಿನ ಬಗ್ಗೆ ಶೀಘ್ರ ತೀರ್ಪು ಸಾಧ್ಯತೆ

ಆಂಧ್ರಪ್ರದೇಶ ಎರಡು ರಾಜ್ಯಗಳಾಗಿ ವಿಭಜನೆಯಾದ ಬಳಿಕ ನೀರಿನ ಮರು ಹಂಚಿಕೆ ಆಗಬೇಕು ಆಂಧ್ರವು ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ, ನೀರು ಹಂಚಿಕೆ ವೇಳೆ ಅಖಂಡ ರಾಜ್ಯ ಇತ್ತು. ನಂತರ ಆಂಧ್ರ- ತೆಲಂಗಾಣ ಪ್ರತ್ಯೇಕ ಆಗಿದ್ದು, ಹಂಚಿಕೆ ಆಗಿದ್ದ ನೀರಲ್ಲಿ ಅವರು ಹಂಚಿಕೊಳ್ಳಬೇಕು ಎನ್ನುವ ವಾದ ಕರ್ನಾಟಕದ್ದಾಗಿದೆ. ಇದೀಗ ಅಂತಿಮ ತೀರ್ಪು ಬರುವ ಹಂತಕ್ಕೆ ಬಂದಿದೆ. ತೀರ್ಪು ಬರುತ್ತಿದ್ದಂತೆ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸಲು ಸರ್ಕಾರ ಮುಂದಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವೆ? ನೀರು ನಿಲ್ಲಿಸುವ ಮುನ್ನ ಆಗಬೇಕಾದ ಜಮೀನು ಸ್ವಾಧೀನ ಆಗಿಲ್ಲ, 20 ಗ್ರಾಮಗಳ ಸ್ಥಳಾಂತರ ಆಗಿಲ್ಲ. ನಮ್ಮ ಪಾಲಿನ ನೀರು ಬಳಕೆ ಯಾವಾಗ? 15 ಲಕ್ಷ ಎಕರೆ ಜಮೀನಿಗೆ ನೀರು ಕೊಡುವುದು ಇನ್ನ್ಯಾವಾಗ? ಬರದ ಬವಣೆಯಿಂದ ಉತ್ತರ ಕರ್ನಾಟಕ ಹೊರಬರುವುದು ಮತ್ಱಾವಾಗ ಎನ್ನುವ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರ ಇಲ್ಲ. ಈಗಾಗಲೇ ಒಂದು ದಶಕದಲ್ಲಿ ಆಲಮಟ್ಟಿ ಜಲಾಶಯದಿಂದ ಆಂಧ್ರಕ್ಕೆ ಒಟ್ಟು 5,611 ಟಿಎಂಸಿ ನೀರು ಹರಿದು ಹೋಗಿದೆ. ಇದರಲ್ಲಿ ನಮ್ಮ ಪಾಲಿನ 1,770 ಟಿಎಂಸಿ ನೀರು ಸಹ ಸೇರಿದೆ.

ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಕೃಷ್ಣಾ ಯೋಜನೆ ಹಂತ-3 ಮುಗಿಸಲು ಒಟ್ಟು ಒಂದು ಲಕ್ಷ ಕೋಟಿ ರೂ. ಅಧಿಕ ಹಣ ಬೇಕು. ಕಳೆದ ಹತ್ತು ವರ್ಷಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳೆಲ್ಲವೂ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಕೊಡುತ್ತ ಬಂದಿರುವ ಅನುದಾನ 1ರಿಂದ 2 ಸಾವಿರ ಕೋಟಿ ರೂ. ಮಾತ್ರ. ಮುಳುಗಡೆ ಆಗುವ ಜಮೀನು ಹಾಗೂ ಪುನರ್ವಸತಿ ಕೇಂದ್ರಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಪರಿಹಾರಕ್ಕೆ ಆರ್ ಆಂಡ್ ಆರ್ (ರೀಹ್ಯಾಬಿಲಿಟೇಷನ್ ಮತ್ತು ರೀಸೆಟಲ್​ವೆುಂಟ್) ಆಯುಕ್ತರ ಕಚೇರಿಯಿಂದ ಖರ್ಚು ಮಾಡಿದ ಹಣ ಕೇವಲ 2,906 ಕೋಟಿ ರೂ. ಮಾತ್ರ. ಇದೇ ರೀತಿ ಸರ್ಕಾರ ಅನುದಾನ ಮುಂದುವರಿಸಿದರೆ ಈ ತಲೆಮಾರಿನವರು ಯೋಜನೆ ಮುಕ್ತಾಯ ಆಗುವುದನ್ನು ಕಾಣುತ್ತಾರೆ ಎನ್ನುವುದೇ ಅನುಮಾನ.

ನಾಯಕರ ಕೆಸರೆರಚಾಟ

ಇದೀಗ ಯೋಜನೆಯನ್ನು ಎರಡು ಹಂತದಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. 519.6 ಮೀಟರ್​ನಿಂದ 522 ಮೀಟರ್​ಗೆ ಮೊದಲ ಹಂತ ಹಾಗೂ 522ರಿಂದ 524.256 ಮೀಟರ್​ಗೆ 2ನೇ ಹಂತ ಎಂದು. ಈ ಬಗ್ಗೆ ಕೋರ್ಟ್​ಗೂ ಅಫಿಡವಿಟ್ ಸಲ್ಲಿಸಿದೆ. ಎರಡು ಹಂತ ಎನ್ನುವ ಗೊಂದಲದ ಬಗ್ಗೆ ಕೈ-ಕಮಲ ಮುಖಂಡರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ‘ಬೊಮ್ಮಾಯಿ ಸರ್ಕಾರ ಇದ್ದಾಗ ಸಂಪುಟ ಉಪ ಸಮಿತಿ 2022ರಲ್ಲಿ ಈ ತೀರ್ಮಾನ ಮಾಡಿದೆ. ಅದನ್ನು ಈಗಿನ ಸರ್ಕಾರ ಮುಂದುವರಿಸಿದೆ’ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ.

ಮಾಜಿ ಜಲಸಂಪನ್ಮೂಲ ಸಚಿವ, ಹಾಲಿ ಸಂಸದ ಗೋವಿಂದ ಕಾರಜೋಳ, ‘ಅದು ನಮ್ಮ ಸರ್ಕಾರದ ತೀರ್ಮಾನ ಅಲ್ಲ. ಬರೀ ಚರ್ಚೆ ಆಗಿತ್ತು. ಅದಕ್ಕೆ ನಾನು ಬೇಡ ಎಂದು ಸಲಹೆ ನೀಡಿದ್ದೆ. ಆ ಸಭೆಯ ಬಳಿಕವೂ ನಾನು ಬಾಗಲಕೋಟೆಗೆ ಸಿಎಂ ಬೊಮ್ಮಾಯಿ ಅವರನ್ನು ಕರೆಸಿ, 524.256 ಮೀಟರ್ ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ವಿತರಣೆ ಮಾಡಿದ್ದೇವೆ. ನಮ್ಮ ಸರ್ಕಾರ ಹೋದ ಬಳಿಕ ಆ ಪ್ರೊಸೀಡಿಂಗ್ ಇಟ್ಟುಕೊಂಡು ಇಂದಿನ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಪ್ರೊಸೀಡಿಂಗ್ ಬಿಟ್ಟು ನಮ್ಮ ಸರ್ಕಾರ 522 ಮೀಟರ್​ಗೆ ಆದೇಶ ಮಾಡಿದ್ದರೆ ತೋರಿಸಲಿ, ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವೆ’ ಎಂದು ಸವಾಲು ಹಾಕಿದ್ದಾರೆ.