ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಐಎಂಎ ಪದಾಧಿಕಾರಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಡಾ.ಶ್ರೀಧರ್, ಡಾ.ಸತೀಶ್ ಕುಮಾರ್, ಡಾ.ಹೇಮಂತ್, ಡಾ.ಸಂಜಯ್ ಮುಂತಾದವರಿದ್ದರು. 
ನ್ಯೂಸ್

ಅತ್ಯಾಚಾರಕ್ಕೆ ಮಲೆನಾಡಿನ ವೈದ್ಯರ ಆಕ್ರೋಶ

ಶಿವಮೊಗ್ಗ: ಕೋಲ್ಕತ್ತದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಮಲೆನಾಡಿನ ವೈದ್ಯ ಸಮೂಹ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ. ಐಎಂಎ ಕರೆ ನೀಡಿದ್ದ ಮುಷ್ಕರಕ್ಕೆ ಶನಿವಾರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಆಸ್ಪತ್ರೆಗಳ ಹೊರರೋಗಿಗಳ ಘಟಕ ಬಂದ್ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವೈದ್ಯರು ಸೀನಪ್ಪ ಶೆಟ್ಟಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅತ್ಯಾಚಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಸರ್ಜಿ ಸಮೂಹ ಆಸ್ಪತ್ರೆಗಳ ಡಾ. ಧನಂಜಯ ಸರ್ಜಿ, ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ದಿನದ 24 ತಾಸು ಸೇವೆ ಸಲ್ಲಿಸುವ ಅನಿವಾರ್ಯತೆ ಇರುತ್ತದೆ. ಇಂತಹ ವೃತ್ತಿಯಲ್ಲಿರುವವರಿಗೆ ರಕ್ಷಣೆಯೇ ಇಲ್ಲದಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ವೈದ್ಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಭಯಪಡುತ್ತಿದ್ದಾರೆ. ಇಂತಹ ಘಟನೆಗಳು ಸಂಭವಿಸಿದ ತಕ್ಷಣ ಮುಚ್ಚಿ ಹಾಕುವ ಪ್ರಯತ್ನ ಕೂಡ ನಡೆಯುತ್ತಿದೆ. ಕೂಡಲೇ ಇಂತಹ ಪ್ರಕರಣ ಸಂಭವಿಸಿದಾಗ ಸರ್ಕಾರ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು. ಕಾಲಹರಣ ಮಾಡದೇ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ವೈದೋ ನಾರಾಯಣೋ ಹರಿಃ ಎಂದು ಹೇಳುತ್ತಾರೆ. ಆದರೆ ವೈದ್ಯರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದನ್ನು ಸರ್ಕಾರಗಳು ತಪ್ಪಿಸಬೇಕು. ಮಹಿಳಾ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೂಡಲೇ ಅತ್ಯಾಚಾರ ಎಸಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ.ಸತೀಶ್ ಕುಮಾರ್, ಉಪಾಧ್ಯಕ್ಷ ಡಾ. ಸಂಜಯ್, ಕಾರ್ಯದರ್ಶಿ ಡಾ. ಶ್ರೀಧರ್, ಪ್ರಮುಖರಾದ ಡಾ. ಸುರೇಶ್, ಡಾ. ಹೇಮಂತ್, ಡಾ.ರಮ್ಯಾ, ಡಾ. ಜಿತೇಂದ್ರ ಕುಮಾರ್, ಡಾ. ಶ್ರೀಕಾಂತ್ ಶೆಟ್ಟಿ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.