ಮೇಲ್ದರ್ಜೆಗೆ ಏರಲಿರುವ ಚಿತ್ರದುರ್ಗದ ಕೋಟೆ ಠಾಣೆ 
ನ್ಯೂಸ್

Web Exclusive| ರಾಜ್ಯದ 62 ಸ್ಟೇಷನ್​ಗಳಿನ್ನು ಪಿಐ ಠಾಣೆ; ಮುಖ್ಯಮಂತ್ರಿ ತವರು ಜಿಲ್ಲೆಗೆ ಸಿಂಹಪಾಲು

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದ ಹಲವು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಚಿಂತನೆ ಒಂದು ವರ್ಷದ ಬಳಿಕ ಕೈಗೂಡಿದೆ. ಉದ್ದೇಶಿತ 142 ಠಾಣೆಗಳ ಪೈಕಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಶಿವಮೊಗ್ಗ ಜಿಲ್ಲೆಯ 9 ಠಾಣೆ ಸೇರಿ 26 ಜಿಲ್ಲೆಗಳ 62 ಠಾಣೆಗಳನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಸೋಮವಾರ (ನ.23) ಆದೇಶಿಸಿದೆ.

ಕನಿಷ್ಠ 30 ಸಿಬ್ಬಂದಿ, ಮೂರಕ್ಕೂ ಅಧಿಕ ಪಿಎಸ್​ಐಗಳಿರುವ ಠಾಣೆಗೆ ಪಿಐ ಠಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯದ ವಿವಿಧ ಕಾನೂನು ಸುವ್ಯವಸ್ಥೆ ಠಾಣೆಗಳಿಗೆ 850 ಪಿಎಸ್​ಐಗಳನ್ನು ಇತ್ತೀಚೆಗೆ ನಿಯೋಜಿಸಿದ್ದು, ಅನೇಕ ಕಡೆ ಖಾಲಿಯಿದ್ದ ಬಹುತೇಕ ಹುದ್ದೆಗಳು ಭರ್ತಿಯಾಗಿವೆ.

ಈ ಠಾಣೆಗಳ ಮೇಲ್ದರ್ಜೆಗೆ ರಕ್ಷಣಾ ಇಲಾಖೆ 2019 ಅಕ್ಟೋಬರ್​ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಕಾರ್ಯ ಹಂಚಿಕೆ, ದೈನಂದಿನ ಕಾನೂನು ಸುವ್ಯವಸ್ಥೆ ಪರಿಪಾಲನೆ, ಅಪರಾಧ ಪತ್ತೆ ಪ್ರಕರಣ ಇತ್ಯಾದಿ ಕರ್ತವ್ಯ ನಿರ್ವಹಣೆ ಸುಸೂತ್ರವಾಗಿ ಸಾಗಲೆಂಬ ಕಾರಣಕ್ಕೆ ಗೃಹ ಇಲಾಖೆ ಪಿಐ - ಎಸ್​ಎಚ್​ಒ (ಸ್ಟೇಷನ್ ಹೆಡ್ ಆಫೀಸರ್)ಗಳನ್ನು ನೇಮಿಸಲು ಮುಂದಾಗಿತ್ತು. ಹೆಚ್ಚುವರಿ ಸಿಬ್ಬಂದಿ, ಇತರೆ ಸೌಕರ್ಯ ಪಡೆಯಲೂ ಇದರಿಂದ ಸಾಧ್ಯವಾಗಲಿದೆ.

ಮರು ಹೊಂದಾಣಿಕೆ: ಮೇಲ್ದರ್ಜೆಗೆ ಏರಿಸಿದ ಠಾಣೆಗಳ ಪಿಐ ಹುದ್ದೆಗಳ ಮರು ಹೊಂದಾಣಿಕೆಗೆ ಸರ್ಕಾರ ಸೂಚಿಸಿದೆ. ವಿವಿಧ ಜಿಲ್ಲೆಗಳ ಡಿಸಿಆರ್​ಬಿಗಳಿಂದ 6, ಡಿಸಿಐಬಿ/ಸಿಸಿಐಬಿಯಿಂದ 31, ವೃತ್ತಗಳಿಂದ 12, ಎಸ್​ಸಿಆರ್​ಬಿಯಿಂದ 5, ಖಾನಾಪುರ ಹಾಗೂ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಗಳಿಂದ ತಲಾ ನಾಲ್ಕು ಪಿಐಗಳ ಸಹಿತ 62 ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ.

ಪಿಐ ಸ್ಟೇಷನ್ ಹೆಚ್ಚಳ: ರಾಜ್ಯದ ಕಮಿಷನರೇಟ್ ವ್ಯಾಪ್ತಿಯ ನಗರಗಳು ಹಾಗೂ ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದು ರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು - 6, ಉಡುಪಿ, ಉಕ, ವಿಜಯಪುರ, ಯಾದಗಿರಿ, ಬಾಗಲಕೋಟೆ ಮತ್ತಿತರೆಡೆ ಪಿಐ ಸ್ಟೇಷನ್​ಗಳಿದ್ದು, ಈಗ ಅವುಗಳ ಸಂಖ್ಯೆ ಹೆಚ್ಚಲಿದೆ.

ಇರಲು ಒಪ್ಪಲ್ಲ: ಪಿಐ ಸ್ಟೇಷನ್​ಗಳಲ್ಲಿ ಸ್ವಾತಂತ್ರ್ಯ ಇರುವುದಿಲ್ಲ ಎಂಬ ಕಾರಣಕ್ಕೆ ಪಿಎಸ್​ಐಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಾರೆ. ಅಲ್ಲಿಂದ ಬೇರೆಡೆ ಹೋಗಲು ಚಿಂತಿಸುತ್ತಾರೆಂಬ ಮಾತಿಗೆ ಹಿರಿಯ ಅಧಿಕಾರಿಗಳು ಸಹಮತ ವ್ಯಕ್ತಪಡಿಸುತ್ತಾರೆ. ಚಿತ್ರದುರ್ಗ ನಗರ ಠಾಣೆಯೊಂದರಲ್ಲೇ ನಾಲ್ಕು ಪಿಎಸ್​ಐ ಹುದ್ದೆಗಳು ಎರಡು ವರ್ಷಗಳಿಂದ ಖಾಲಿ ಉಳಿದಿವೆ. ಜಿಲ್ಲೆಯಲ್ಲಿ ಈಗಾಗಲೇ 3 ಪಿಐ ಠಾಣೆಗಳಿವೆ. ಹೊಸದಾಗಿ 9 ನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಕೋರಿಕೆ ಪೈಕಿ ಮೂರಕ್ಕೆ ಮನ್ನಣೆ ಸಿಕ್ಕಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 3 ಠಾಣೆಗಳು ಮೇಲ್ದರ್ಜೆಗೆ ಏರಿವೆ. ನಮಗಿನ್ನೂ ಡಿಜಿ ಕಚೇರಿಯಿಂದ ಮಾಹಿತಿ ಬರಬೇಕಿದೆ. ಮೇಲ್ದರ್ಜೆ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದೆರಡು ತಿಂಗಳ ಸಮಯಾವಕಾಶ ಬೇಕಾಗಬಹುದು. | ಜಿ.ರಾಧಿಕಾ ಎಸ್​ಪಿ. ಚಿತ್ರದುರ್ಗ

ಯಾವೆಲ್ಲ ಸ್ಟೇಷನ್​ಗಳು ಮೇಲ್ದರ್ಜೆಗೆ?

ನೆಲಮಂಗಲ ನಗರ ಠಾಣೆ, ಕುಣಿಗಲ್, ಪಾವಗಡ. ರಾಮನಗರ ಗ್ರಾಮಾಂತರ, ಬಿಡದಿ, ತಾವರಕೆರೆ. ಚಿಂತಾಮಣಿ ಗ್ರಾಮಾಂತರ.ಬಾಗೇಪಲ್ಲಿ, ಶ್ರೀನಿವಾಸಪುರ. ಹುಣಸೂರು ನಗರ, ಗ್ರಾಮಾಂತರ, ಬಿಳಿಕೆರೆ. ಪಿರಿಯಾಪಟ್ಟಣ, ಎಚ್​ಡಿ ಕೋಟೆ. ಮಂಡ್ಯ ಗ್ರಾಮಾಂತರ. ಹಾಸನ ಬಡಾವಣೆ. ಚಾಮರಾಜ ನಗರ ಪೂರ್ವ, ಗುಂಡ್ಲುಪೇಟೆ. ಮಡಿಕೇರಿ ಗ್ರಾಮಾಂತರ. ದಾವಣಗೆರೆ ಬಡಾವಣೆ, ಗ್ರಾಮಾಂತರ, ಬಸವನಗರ, ಸಂಚಾರ ವೃತ್ತ. ಶಿವಮೊಗ್ಗ ದೊಡ್ಡಪೇಟೆ, ಕೋಟೆ, ವಿನೋಬನಗರ ವೃತ್ತ, ಸಂಚಾರ ವೃತ್ತ, ತುಂಗಾನಗರ, ತೀರ್ಥಹಳ್ಳಿ, ಭದ್ರಾವತಿ ಗ್ರಾಮಾಂತರ, ಸಾಗರ ಗ್ರಾಮಾಂತರ, ಶಿಕಾರಿಪುರ ಗ್ರಾಮಾಂತರ.

ಚಿತ್ರದುರ್ಗ ಕೋಟೆ, ಚಳ್ಳಕೆರೆ, ಹಿರಿಯೂರು. ರಾಣೆಬೆನ್ನೂರು ಗ್ರಾಮಾಂತರ. ಬಂಟ್ವಾಳ ನಗರ. ಹೊನ್ನಾವರ. ಚಿಕ್ಕಮಗಳೂರು ನಗರ, ಗ್ರಾಮಾಂತರ, ಅಜ್ಜಂಪುರ. ಉಡುಪಿ ನಗರ. ಗೋಕಾಕ್ ನಗರ, ಅಥಣಿ, ರಾಯಬಾಗ, ಘಟಪ್ರಭ, ಸಂಕೇಶ್ವರ. ಧಾರವಾಡ ಗ್ರಾಮಾಂತರ. ಬಸವನಬಾಗೇವಾಡಿ, ಇಂಡಿ, ಗಾಂಧಿ ಚೌಕ. ಬಾಗಲಕೋಟೆ ನಗರ. ಗದಗ ನಗರ. ಬಳ್ಳಾರಿ ಗ್ರಾಮಾಂತರ. ರಾಯಚೂರು ಸದರ್ ಬಜಾರ್, ಮಾನ್ವಿ. ದೇವದುರ್ಗ, ಲಿಂಗಸೂರು. ಬೀದರ್ ಗಾಂಧಿಗಂಜ್, ನ್ಯೂಟೌನ್.