ಸಾಗರ: ಹೊಸತು ಸ್ವೀಕರಿಸೋಣ, ಆದರೆ ಹಳೆಯದನ್ನು ಮರೆಯಬಾರದು. ನಮ್ಮ ಪೂರ್ವಜರು ಮಾಡಿರುವ ವ್ರತಗಳನ್ನು ಅನುಸರಿಸುತ್ತಿರುವುದು ಹಳೆಯ ಸಂಗತಿಗಳನ್ನು ಮರೆತಿಲ್ಲ ಎನ್ನುವುದಕ್ಕೆ ಸಾಕ್ಷಿ. ಉಪಾಸನೆ ಎನ್ನುವುದು ಸನಾತನ ಭಾರತೀಯರ ಜೀವನ ವಿಧಾನ ಆಗಿದೆ ಎಂದು ಸಂಸ್ಕೃತ ಉಪನ್ಯಾಸಕ ಗಜಾನನ ಭಟ್ ರೇವಣಕಟ್ಟಾ ಹೇಳಿದರು.
ನಗರದ ಅಜಿತ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಳೆ ಅಷ್ಟಮೀ ವ್ರತ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ವ್ರತ ಎಂಬ ಪದ ನಿಯಮ, ಪೂಜೆ, ಪ್ರಾರ್ಥನೆ, ಹರಕೆ, ಪ್ರತಿಜ್ಞೆ, ಶೀಲ ಮೊದಲಾದ ಅರ್ಥಗಳನ್ನು ಹೊಂದಿದೆ. ವ್ರತದಲ್ಲಿ ನೈಮಿತ್ತಿಕ- ಕಾಮ್ಯಗಳೆಂಬ ಭೇದ ಕಾಣುತ್ತೇವೆ ಎಂದು ತಿಳಿಸಿದರು.
ಗ್ರಂಥವು ಕೇದಾರೇಶ್ವರ, ಮಹಾಲಕ್ಷ್ಮಿ, ಧಾನ್ಯಶಂಕರ ಎಂಬ ಮೂರು ದೇವತೆಗಳ ವ್ರತರೂಪ ಉಪಾಸನೆಯನ್ನು ಸಾರುತ್ತಿದೆ. ಆಸ್ತಿಕ ಸಮಾಜದಲ್ಲಿ ಭಾದ್ರಪದ ಶುಕ್ಲ ಅಷ್ಟಮಿ-ನವಮಿ ತಿಥಿಗಳಲ್ಲಿ ವಿಶೇಷವಾಗಿ ಆಚರಿಸುವ ವ್ರತವು ಮಿಶ್ರಪೂಜೆ ಹೊಂದಿದೆ. ಕೆಲ ಕಡೆ ಅಷ್ಟಪುತ್ರ, ಪಶುಪತಿ ದೇವತೆಗಳನ್ನು ಸಮೀಕರಿಸಿಕೊಂಡಿದೆ. ದೋರಗ್ರಂಥಿಗಳ ಧಾರಣೆಯನ್ನು ಪ್ರಧಾನವಾಗಿರಿಸಿ ನಡೆಯುವುದರಿಂದ ಎಳೆ ಅಷ್ಟಮೀ ವ್ರತವೆಂದು ಪ್ರಸಿದ್ಧವಾದುದು ಎಂದರು.
ವಿದ್ವಾನ್ ನಾರಾಯಣ ಭಟ್, ನವೀನ್ ಪುರುಷೋತ್ತಮ, ಗಣಪತಿ, ವ್ರತ ಗ್ರಂಥದ ಪ್ರಧಾನ ಸಂಪಾದಕ ರವೀಂದ್ರ, ಸಹ ಸಂಪಾದಕ ಅಭಿಷೇಕ ಭಟ್, ಲಕ್ಷ್ಮಿನಾರಾಯಣ ಭಟ್ ಇತರರಿದ್ದರು.