ನ್ಯೂಸ್

ಮುಖ್ಯಮಂತ್ರಿಗಳು ಬರುವಾಗ ದಾರಿಗೆ ಅಡ್ಡ ಬರದಂತೆ ಜಾನುವಾರುಗಳ ಕಟ್ಟಿ ಹಾಕಿ: ಇಂಜಿನಿಯರ್​ಗಳಿಗೆ ಇಲಾಖೆ ಸೂಚನೆ!

ಮಿರ್ಜಾಪುರ: ರಸ್ತೆಯಲ್ಲಿ ಎಲ್ಲಾದರೂ ಹಸು, ಎಮ್ಮೆಗಳನ್ನು ಕಂಡರೆ ಹಗ್ಗದಿಂದ ಕಟ್ಟಿ ಹಾಕಿ ಎಂದು ಉತ್ತರಪ್ರದೇಶ ರಾಜ್ಯದ ಲೋಕೋಪಯೋಗಿ ಇಲಾಖೆ ತನ್ನ ಇಂಜಿನಿಯರ್​ಗಳಿಗೆ ಸೂಚನೆ ನೀಡಿದೆ.

ಜನವರಿ 29ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗಂಗಾ ಯಾತ್ರಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ದಾರಿಯಲ್ಲಿ ಜಾನುವಾರುಗಳು ಕಂಡರೆ ಅವುಗಳನ್ನು ಕಟ್ಟಿ ಹಾಕಿ. ಅವುಗಳಿಂದಾಗಿ ಮುಖ್ಯಮಂತ್ರಿ ಯೋಗಿ ಅವರ ದಾರಿಗೆ ಅಡ್ಡ ಬರದಂತೆ ತಡೆಯಿರಿ. ಅಲ್ಲದೆ ಎಲ್ಲ ಜೂನಿಯರ್​ ಇಂಜಿನಿಯರ್​ಗಳ ನಿಮ್ಮ ನಿಮ್ಮ ತಂಡದೊಂದಿಗೆ ಹಾಜರಿರತಕ್ಕದ್ದು. ಜತೆಗೆ 8ರಿಂದ 10 ಹಗ್ಗಗಳನ್ನು ತನ್ನಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಈ ಸೂಚನೆಗೆ ಪ್ರತಿಕ್ರಿಯಿಸಿರುವ ಮಿರ್ಜಾಪುರ ಇಂಜಿನಿಯರ್ಸ್​ ಅಸೋಸಿಯೇಷನ್​, ನಮ್ಮ ಇಂಜಿನಿಯರ್​ಗಳಿಗೆ ಜಾನುವಾರುಗಳನ್ನು ಹಿಡಿದು ಅಭ್ಯಾಸವಿಲ್ಲ. ಹಾಗಾಗಿ ಪ್ರಾಣಿಗಳನ್ನು ಹಿಡಿಯಲು ಹೋದಾಗ ಅನಾಹುತವಾಗಿ ಗಾಯಗೊಂಡರೆ ಅಸೋಸಿಯೇಷನ್​ ಜವಾಬ್ದಾರವಾಗುವುದಿಲ್ಲ ಎಂದಿದೆ. ಮತ್ತೆ ಈ ಕಾರ್ಯವನ್ನು ಯಾರಾದರೂ ಪರಿಣಿತ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ನೀಡುವುದು ಉತ್ತಮ ಎಂದು ಸಲಹೆಯನ್ನೂ ನೀಡಿದೆ.

ಈ ಮುಂಚೆ ಸಾಮೂಹಿಕ ಮದುವೆಯಲ್ಲಿ ಭಾಗವಹಿಸುವ ವಧುಗಳಿಗೆ ಶೃಂಗಾರಗೊಳ್ಳಲು ಸಹಕರಿಸಲು ಶಾಲಾ ಶಿಕ್ಷಕರನ್ನು ನೇಮಿಸಿ ವಿವಾದವಾಗಿತ್ತು. ನಂತರ ಈ ಸೂಚನೆಯನ್ನು ವಾಪಸ್​ ಪಡೆಯಲಾಗಿತ್ತು.

ಇದರ ಬೆನ್ನಲ್ಲೇ ಮತ್ತೊಂದು ಸೂಚನೆ ವೈರಲ್​ ಆಗಿದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್​ಗಳಿಗೆ ಜಾನುವಾರು ಕಟ್ಟಿ ಹಾಕಲು ತಿಳಿಸಿದ ಇಲಾಖೆ ಪೇಚಿಗೊಳಗಾಗಿದೆ. (ಏಜೆನ್ಸೀಸ್​)