ತೀವ್ರವಾಗಿ ಗಾಯಗೊಂಡಿರುವ ಪೂಜಾರಿಯೋರ್ವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಮುಖ, ತಲೆಗೆಲ್ಲ ಗಾಯವಾಗಿ ರಕ್ತಸುರಿಯುತ್ತಿರುವ ಸ್ಥಿತಿಯಲ್ಲಿ, ಎಚ್ಚರವಿಲ್ಲದೆ ಕುಳಿತಿರುವ ಈ ಅರ್ಚಕರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಇವರು ಉತ್ತರ ಪ್ರದೇಶದ ವೃಂದಾವನದಲ್ಲಿರುವ ಇಮ್ಲಿಟಾಲಾ ದೇವಸ್ಥಾನದ ಅರ್ಚಕರಾದ ಕೃಷ್ಣದಾಸ್ ಅವರು. ಹಿರಿಯ ವೈಷ್ಣವ ಸಾಧುಗಳಾದ ಇವರ ಮೇಲೆ ಹಲವು ಗೂಂಡಾಗಳು ಸೇರಿ ಭೀಕರವಾಗಿ, ನಿಷ್ಕರುಣೆಯಿಂದ ಹಲ್ಲೆ ನಡೆಸಿದ್ದಾರೆ. ದುಷ್ಕರ್ಮಿಗಳಲ್ಲಿ ಇಬ್ಬರು ಬಾಂಗ್ಲಾದೇಶಿಗರು ಎಂಬುದು ಗೊತ್ತಾಗಿದೆ. ಉಳಿದವರೂ ಕೂಡ ಹೊರಗಿನವರೇ ಆಗಿದ್ದು ಸದ್ಯ ಎಲ್ಲ ಆರೋಪಿಗಳೂ ತಪ್ಪಿಸಿಕೊಂಡಿದ್ದಾರೆ. ಮಥುರಾ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಫೋಟೋಗಳನ್ನು ಸಾಧ್ಯವಾದಷ್ಟು ಶೇರ್ ಮಾಡಬೇಕು. ಹತ್ಯೆಯನ್ನು ಖಂಡಿಸಿ, ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಬೇಕು. ಇದೊಂದು ಕೋಮು ಹತ್ಯೆ ಎಂದು ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ ಎಂದು ಫೇಸ್ಬುಕ್ನಲ್ಲಿ ಬರೆಯಲಾಗಿತ್ತು.
ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ತೀವ್ರ ಆತಂಕ ಸೃಷ್ಟಿಯಾಗಿತ್ತು.
ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಈ ಫೋಟೋಗಳ ಸತ್ಯಾಸತ್ಯೆಯನ್ನು ಬಯಲಿಗೆಳೆದಿದೆ. ಈ ಫೋಟೋವನ್ನು ರಿವರ್ಸ್ ಸರ್ಚಿಂಗ್ಗೆ ಕೊಟ್ಟಾಗ, ಸುದ್ದಿ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೋರ್ವರೂ ಕೂಡ ಈ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದು ಕಂಡುಬಂತು. ಹಾಗೇ ಅದಕ್ಕೆ ಮಥುರಾ ಪೊಲೀಸರು ಪ್ರತಿಕ್ರಿಯೆಯನ್ನೂ ನೀಡಿದ್ದರು.
ಈ ಗಾಯಗೊಂಡ ಸ್ಥಿತಿಯಲ್ಲಿರುವ ಸಾಧುವಿನ ಮೇಲೆ ನಡೆದ ಹಲ್ಲೆ ಯಾವುದೇ ಕೋಮು ಗಲಭೆಗೆ ಸಂಬಂಧಪಟ್ಟಿದ್ದಲ್ಲ. ಹಾಗೇ ಅವರ ಹೆಸರು ಕೃಷ್ಣದಾಸ್ ಎಂದೂ ಅಲ್ಲ. ಇವರ ಹೆಸರು ತಮಲ್ ಕಾಂತಿ ದಾಸ್ ಎಂದು. ಕಾಂತಿ ದಾಸ್ ಮತ್ತು ಇಮ್ಲಿಟಾಲಾ ದೇವಸ್ಥಾನದ ಟ್ರಸ್ಟ್ ಚೇರ್ಮನ್ ಆಗಿರುವ ಬಿ.ಪಿ.ಸಾಧು ಅವರ ಬೆಂಬಲಿಗರ ನಡುವೆ ಮೇ 11ರಂದು ಗೌಡಿಯಾ ಮಠದ ಕಾಂಪ್ಲೆಕ್ಸ್ನಲ್ಲಿ ಹೊಡೆದಾಟ ನಡೆದಿತ್ತು. ಈ ಗಲಾಟೆಯಲ್ಲಿ ಕಾಂತಿ ದಾಸ್ ತೀವ್ರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ
ಹಾಗೇ, ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂ ಮಥುರಾದ ಡಿಎಸ್ಪಿ ರಮೇಶ್ ತಿವಾರಿ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ವಿವರ ಕೇಳಿದೆ. ಮಠದಲ್ಲಿರುವ ಕೋಣೆಯ ಬೀಗ ಹಾಕುವುದಕ್ಕೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ. ಕಾಂತಿ ದಾಸ್ ಅವರು ಕಾಂಪ್ಲೆಕ್ಸ್ನಲ್ಲಿರುವ ಕೆಲವು ಕೋಣೆಗಳಿಗೆ ಬೀಗ ಹಾಕಿದ್ದರು. ಮೇ 11ರಂದು ಬೆಳಗ್ಗೆ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಬಂದು ಬಾಗಿಲು ತೆಗೆಯಲು ಯತ್ನಿಸಿದಾಗ ತಡೆದರು. ಅದೇ ದೊಡ್ಡ ಗಲಾಟೆಯಾಗಿ ಚೇರ್ಮನ್ ಸಾಧು ಅವರ ಬೆಂಬಲಿಗರು ದಾಸ್ ಮೇಲೆ ಹಲ್ಲೆ ನಡೆಸಿದರು ಎಂದು ರಮೇಶ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರೈತ ಸಂಘ ಪಟ್ಟು
ಹಾಗೇ, ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುತ್ತಿರುವುದಾಗಿ ಮಾಹಿತಿ ನೀಡಿದ್ದು, ಇದು ಯಾವುದೇ ಕೋಮು ಗಲಾಟೆಯಲ್ಲ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. (ಏಜೆನ್ಸೀಸ್)
ತಪ್ಪು ಮಾಹಿತಿಯೊಂದಿಗೆ ವೈರಲ್ ಆದ ಪೋಸ್ಟ್ ಇದು...: